-ಬಾಪು ಅಮ್ಮೆಂಬಳ
ಅಪ್ಪನ ಬಗ್ಗೆ ಕವಿತೆ ಬರೆಯಬೇಕೆಂದು
ಕುಳಿತರೆ
ಪದಗಳಿಗೂ ಭಯ ,ಅಳುಕು
ಎದೆಯಿಂದ ಕೆಳಗೆ ಪದಗಳು
ಉದುರುವುದೇ ಇಲ್ಲ ;
ಅಪ್ಪನೆಂದರೆ ಹಾಗೆಯೇ .
___________
ಅಪ್ಪನೆಂದರೆ ಹಾಗೆಯೇ,
ಮುಖ ನೋಡಿ ನಗುವುದಿಲ್ಲ
ಉಮ್ಮನಂತೆ ಎದೆಗಪ್ಪಿಕೊಳ್ಳುವುದಿಲ್ಲ
ನನ್ನ ನೋವಿಗೆ ಕಣ್ಣೀರಿಟ್ಟಿದ್ದು ನೋಡಿಯೇ ಇಲ್ಲ
ಪ್ರತಿ ಬಾರಿಯೂ ಒರಟು
'ಊಟ ಮಾಡಿದಿಯಾ' ಎನ್ನುವಾಗಲೂ ಅಷ್ಟೆ.
___________
ಅಪ್ಪನೆಂದರೆ ಹಾಗೆಯೇ
ಬಾರಿ ಬಾರಿಗೂ ಕನಸುಗಳಿಲ್ಲ ಎನ್ನುತ್ತಾನೆ
ನನ್ನೊಳಗೆ ಕನಸುಗಳ ಹಣೆದು
ದಾರಿ ತೋರಿದ್ದು ಅವನೇ
ದಾರಿಯೋ , ಸುಗಮ ಅತಿ ಸುಗಮ.
ಈಗೀಗ ಅನಿಸುತ್ತಿದೆ ,
ಇದು ಅಪ್ಪನದೇ ಕನಸಿನ ದಾರಿ ;
ನನಗಾಗಿ ಬಿಟ್ಟುಕೊಟ್ಟಿದ್ದಾನೆ.
___________
ಅಪ್ಪನೆಂದರೆ ಹಾಗೆಯೇ ,
ಮಾತು ಮಾತಿಗೂ ಸಿಡುಕುತ್ತಾನೆ
ಕೆಲವೊಮ್ಮೆ ಕ್ರೂರಿಯಂತೆಯೂ ಕಾಣುತ್ತಾನೆ .
ಬೆತ್ತದ ರುಚಿ ತೋರಿಸಿದ ದಿನ
ರಾತ್ರಿ ತರುವ ಚಕ್ಕುಲಿಯ ಘಮ ಮಾತ್ರ ,
ನೋವನ್ನೆಲ್ಲ ಟಪ್ಪೆಂದು ಮರೆಸುತ್ತದೆ ;
ನಿಜ ಹೇಳಿ ಅಪ್ಪ ನನ್ನ ಪ್ರೀತಿಸುತ್ತಾನ...!?
Comments
Post a Comment