ಬೆಕ್ಕು ಮತ್ತು ವ್ಯಾಪಾರಿ

-ಬಾಪು ಅಮ್ಮೆಂಬಳ

ಬಂಡಸಾಲೆಯಲ್ಲಿ ಪಾರಿವಾಳ
ಕಾಳಿಗಾಗಿ ತವಕಿಸುತ್ತಿತ್ತು
ಕಂಠ ಪುಚ್ಚೆಯೊಂದು
ಪಾರಿವಾಳಕ್ಕಾಗಿ ಹೊಂಚುಹಾಕುತ್ತಿತ್ತು

ಗಿರಾಕಿ ದಿನಸು  ಕಮ್ಮಿಗೆ
ಸಿಗಬಹುದೆಂದು ತವಕಿಸುತ್ತಿದ್ದ
ಬಂಡಸಾಲೆಯವ ಅವನನ್ನು
ಹೇಗೆ ಕೊಲ್ಲದೇ  ಕೊಲ್ಲುದೆಂದು
ಚಿಂತಿಸುತ್ತಿದ್ದ

ಕಂಠ ಪುಚ್ಚೆ ಸೊಬಗನಂತೆ
ಕಾಳಿನ ಹತ್ತಿರವೇ ಕತ್ತು
ತಿರುಗಿಸಿ ಕೂತಿತು
ಪಾರಿವಾಳ ಪುಚ್ಚೆಯನ್ನು
ಸೊಬಗನೇ ಇರಬಹುದೆಂದು ಕಾಳನ್ನು ತಿನ್ನತೊಡಗಿತು

ಕಪಟಿ ವ್ಯಾಪಾರಿ ಬಾಯಿತುಂಬ
ಪೊಟ್ಟುನಗೆಯನ್ನು ಬೀರಿದ
ಮುಗ್ಧ ಗಿರಾಕಿ ಅದನ್ನೆ
ನಿಜವೆಂದು ನಂಬಿ ಖರೀದಿಸ ತೋಡಗಿದ

ಕಾಳು ತಿನ್ನುತ್ತಿದ್ದ ಪಾರಿವಾಳವನ್ನು
ಒಂದೇ ನೆಗೆತಕ್ಕೆ
ಕೊಂದು ಹಾಕಿತು
ಬಂಡಸಾಲೆಯವ ಮುಗ್ಧ
ಗಿರಾಕಿಯನ್ನು ರಕ್ತ ಬರದಂತೆ
ಕತ್ತುಕೊಯ್ದ

ಪಾರಿವಾಳದ ರಕ್ತ ಅಲ್ಲೇ
ಹರಿಯುತ್ತಿತ್ತು
ಗಿರಾಕಿ ಮರುಕ ಪಟ್ಟು
ಪಾರಿವಾಳದ ರಕ್ತವನ್ನು
ನೋಡುತ್ತಿದ್ದ
ಅವನ ಬೆವರನ್ನು ಹೀರಿದ
ಬಂಡಸಾಲೆಯವ ಮೀಸೆಯಡಿಯಿಂದ
ಕುಹಕನಗೆ ನಗುತ್ತಿದ್ದ

Comments