-ಬಾಪು ಅಮ್ಮೆಂಬಳ
ಕಥೆ ಗೊತ್ತಾ..!!.... ??
ನಿನ್ನೆ ರಾತ್ರಿ ಆತ ಕಾರಿನ ಹಿಂದಿನ ಸೀಟಲ್ಲಿ
ಕುಳಿತುಕೊಳ್ಳುವಂತೆ ಹೇಳಿ ಬಿಟ್ಟ .!
ಕತೆ ಇಷ್ಟೇ ,
ನಿಮಗೂ ಗೊತ್ತಿರಬಹುದು
ನನಗೆ ಕವಿತೆ ರಾತ್ರಿಯೇ ಸಿಗೋದು ,
ಕವಿತೆ ಹೆಕ್ಕಿ ಮುಗಿಯಲಂತೂ ಹತ್ತು ಗಂಟೆ ಆಗೇ ಆಗುತ್ತೆ .!
ಅಮ್ಮೆಂಬಳವೇನು ದೊಡ್ಡ ಶಹರವೂ ಅಲ್ಲ
ನಗರದಿಂದ ಎಂಟು ಗಂಟೆಗೇ ಕೊನೆಯ ಬಸ್ಸು
ಬಸ್ಸುಗಳೆಲ್ಲಾ ಹೋದ ನಂತರ
ಆತನೇ ನನಗೆ 'ಲಿಫ್ಟ್' ಕೊಡೋದು ,
ನೆರೆಯವನಾದರೂ ಪರಿಚಯವಿರಲಿಲ್ಲ ಇತ್ತೀಚೆಗಿನವರೆಗೆ ,
ಅದದರ ಅಗತ್ಯವೂ ಇರಲಿಲ್ಲ ನನಗೂ ಅವನಿಗೂ !!
ದಿನಾ ಲಿಫ್ಟ್ ಕೊಡುವ ಆತನ ಕಾರಿನ ,
ಹಿಂದಿನ ಸೀಟಿನಲ್ಲಿ ಪುಸ್ತಕಗಳೇ ತುಂಬಿತ್ತು
ನಾನಂತೂ ಪುಸ್ತಕ 'ಕೊದಿಯಲ' ,
ಓದಲು ಕೊಡದಿದ್ದರೆ ಕದ್ದು ಓದೂದು ನನ್ನ ಜನ್ಮ ಸಿದ್ಧ ಹಕ್ಕು ,
ಅದನ್ನು ಪಡೆದೇ ತೀರುತ್ತೇನೆ ಎಂಬ ಹಠ ಬೇರೆ !!
ದಿನಾ ರಾತ್ರಿ ಕಾರನ್ನೇರುವ ಮುಂಚೆ ,
ಹಿಂದೆ ಕುಳಿತುಕೊಳ್ಳುತ್ತೇನೆಂದು ಬೇಡಿಕೆ ಇಡುತ್ತಿದ್ದೆ ,
ಆತ ಬೇಡ ಮುಂದೆಯೇ ಕುಳಿತು ಕೋ ,
ಮಾತಾಡಿಕೊಂಡೇ ಹೋಗುವ ಎನ್ನುತ್ತಿದ್ದ ,
ಜೊತೆಗೆ ನನ್ನ ಪ್ಯಾಂಟಿನ ಕಿಸೆಯನ್ನೂ ಗಮನಿಸುತ್ತಿದ್ದ ,
ಕಿಸೆಯೊಳಗೆ ಚೂರಿ , ಗನ್ನು ಏನಾದರು ಇದ್ದರೆ....ಸಂಶಯ ಅವನಿಗೆ..!!
'ರಾತ್ರಿ ಯಾರನ್ನೂ ಹತ್ತಿಸಲ್ಲ ನಾನು
ನಿನ್ನ ಪರಿಚಯವಿದೆ ಆದ್ರಿಂದ.....'ಎಂದು ದಿನಾ ಹೇಳುತ್ತಿದ್ದ ,
ಎಲ್ಲೋ ರಾತ್ರಿ ವೇಳೆ ನಡೆದ ಕೊಲೆಯಲ್ಲಿ ,
ಬಂದಿತರಾದ ಜನರಿಗೆ 'ಮುಹಮ್ಮದ್' , 'ಅಬ್ದುಲ್' ಎಂದು ಸೇರಿಸಿ ಕಥೆಯೂ ಹೇಳುತ್ತಿದ್ದ ,
ಜೊತೆಗೆ ಐಸೀಸ್ ಕ್ರೂರತೆಗೂ ಮರುಗುತ್ತಿದ್ದ.
ಮೊನ್ನೆ ದಿನ ನಾನೂ ಮಾತಾಡಿದ್ದೆ ,
ರವಿ,ಸೋಮವಾರ ಬಿಡುವಿದ್ದರೆ ಇಲ್ಲಿಗೆ ಬನ್ನಿಯೆಂದಿದ್ದೆ ಅಷ್ಟೆ .!!
ಯಾರೋ ಅಲ್ಲಿ ನನ್ನ ಬಗ್ಗೆ ಕಿವಿಕಚ್ಚಿರಬೇಕು ,
ನಿನ್ನೆ ಕಾರು ಹತ್ತುವಾಗಲೇ ಆತನ ನಗುವಿನಲ್ಲಿ ಪಶ್ಚಾತಾಪವಿತ್ತು ,
ಹಿಂದಿನ ಸೀಟಿನಲ್ಲೇ ಕುಳಿತುಕೊ ,
ಕವಿತೆಯೆಲ್ಲಾ ಹೆಕ್ಕುತ್ತಿಯಂತೆ !,
ಮಹಮೂದ್ ಗವಾನ್ ದೊಡ್ಡ ಸಾಧಕನಂತೆ !,
ಅಬ್ದುಲ್ ಗಫ್ಫಾರ್ ಖಾನ್ ಗಡಿನಾಡ ಗಾಂಧಿಯಂತೆ !
ಎಂದಷ್ಟೇ ಹೇಳಿ ;
ನೀ ಓದು , ಕೆಲವು ಹೊಸ ಪುಸ್ತಕಗಳಿವೆ ಎಂದ .!!
Comments
Post a Comment