-ಬಾಪು ಅಮ್ಮೆಂಬಳ
ವೃದ್ದಾಶ್ರಮ ಕಣ್ಣೀರಿಡುತ್ತಿದೆ ,
ಹೆತ್ತು ಹೊತ್ತ ಮಕ್ಕಳ ನೆನೆದು.
ಯಾ ರಸೂಲುಲ್ಲಾಹ್ ತಮ್ಮ ಮೇಲೆ ಶಾಂತಿ:
ವೃದ್ದ ಹೆತ್ತವರ ಇಟ್ಟು ,
ಸ್ವರ್ಗಕ್ಕೆದಾರಿ ಮಾಡುತ್ತಿದ್ದಾರೆ ,ವಿಜಯಿಯಾಗುತ್ತಿದ್ದಾರೆ.
ಬ್ರೂಣವೊಂದು ಮಣ್ಣು ಸೇರುತ್ತಿದೆ ,
ಹೆಣ್ಣೆಂಬ ಕಾರಣಕ್ಕಾಗಿ .
ಯಾ ರಸೂಲುಲ್ಲಾಹ್ ತಮ್ಮ ಮೇಲಿರಲಿ ಶಾಂತಿ:
ಹೆಣ್ಣನ್ನು ಕಣ್ಣಾಗಿ ಕಾಪಾಡಿ ,
ಸ್ವರ್ಗಕ್ಕೆ ಅಡಿಯಿಡುತ್ತಿದ್ದಾರೆ ,ಜಯಿಸುತ್ತಿದ್ದಾರೆ.
ಅಹಂಕಾರಿ 'ಹಣ' ,ಹತ್ತಾರು ಪುಂಡರ ಕಟ್ಟಿ,
ಊರ ತುಂಬಾ ಅನ್ಯಾಯವೆಸಗುತ್ತಿದೆ.
ಯಾ ರಸೂಲುಲ್ಲಾಹ್ ಶಾಂತಿ ತಮ್ಮ ಮೇಲೆ ;
ಜಗದೊಡೆಯನ ಕರುಣೆ ನಿರೀಕ್ಷಿಸಿ ,
ಭೂಲೋಕದಿ ಜೀವಿಗಳಿಗೆ ನೆರವಾಗಿತ್ತಿದ್ದಾರೆ.
ಕಣ್ಣುಗಳು ಮುಚ್ಚುತ್ತಿವೆ ,ಹಸಿವ ಕಂಡರೂ,
ಕೈ ಬದುಕ ಕಸಿಯುತ್ತಿವೆ.
ಶಾಂತಿ ತಮ್ಮ ಮೇಲೆ ಯಾ ರಸೂಲುಲ್ಲಾಹ್;
ಹಸಿದ ಹೊಟ್ಟೆಗಳು ತಂಪಾಗುತ್ತಿದೆ,
ಬದುಕಿಗೆ ಕೈ ಜೋಡಿಸುತ್ತಿದ್ದಾರೆ.
ಪವಿತ್ರ ದೇಹಗಳು,ಸಹೋದರರ ಸೇರಿಸುತ್ತಿಲ್ಲ,
ಅಸ್ಪೃಶ್ಯ ,ಕೀಳು,ಕರಿಯ ಆ ದೇಹಗಳು.
ಯಾ ರಸೂಲುಲ್ಲಾಹ್ ಶಾಂತಿ ಶಾಂತಿ ಶಾಂತಿ;
ಹೆಗಲಿಗೆಗಲು ಕೊಟ್ಟು ಬಾಗುತ್ತಿದ್ದಾರೆ,
ಒಂದೇ ತಟ್ಟೆಯಲ್ಲಿ ಉಣ್ಣುತ್ತಿದ್ದಾರೆ,ಹೃದಯವಂತರಾಗಿದ್ದಾರೆ.
ಯಾ ರಸೂಲುಲ್ಲಾಹ್ ತಮ್ಮ ಮೇಲಿರಲಿ ,
ಸಾವಿರ ಸಾವಿರ ಸಲಾಂ.
ಸ್ವಲ್ಲಲ್ಲಾಹುಅಲೈಹಿವಸಲ್ಲಂ
Comments
Post a Comment