ಸಂತೆಯೊಳಗಿನ ಚಹಾದ ಹುಡುಗಿ

-ಬಾಪು ಅಮ್ಮೆಂಬಳ
ಸಂತೆಯೊಳಗೆ ಚಹಾ ಮಾರುವ ಹುಡುಗಿ ನಾ;
ನನ್ನೊಂದಿಗೆ ಉಮ್ಮ,ಒಡಹುಟ್ಟಿದವರೂ ಚಹಾ ಕುಡಿಯ ಬೇಕಾದರೆ
ನನ್ನ ಥರ್ಮಾಸಿನ ಚಹಾ ಮುಗಿಯಬೇಕು.

ಶಾಲೆಯ ದರ್ದು ನನಗಿಲ್ಲ,
ಸಂತೆಯೊಳಗಿನ ಚಹಾ ಕೊಳ್ಳುವವರೇ ಭಾಷಾ ಪಂಡಿತರು.
ಮುಗಿದ ಚಹಾದ ಲೆಕ್ಕಗಳೇ ಗಣಿತದ ಸವಾಲುಗಳು.
ಸಂತೆಯೊಳಗಿನ ಜನರೇ ಸಮಾಜ ವಿಜ್ಞಾನ
ಚಹಾ ಮಾಡಿಕೊಡುವ ಉಮ್ಮಾ ವಿಜ್ಞಾನ ಶಿಕ್ಷಕಿ .

ತಂದೆಯ ಕಾಯಕವೇನೆಂಬ ಸಂತೆಯೊಳಗಿನ ಪ್ರಶ್ನೆಗೆ,
ತೀರಿಹೋದರೆಂಬ ಸಿದ್ದವಾಗಿರುವ ಉತ್ತರವಿದೆ
ಗೊತ್ತು ನನಗೆ ;
ವರದಕ್ಷಿಣೆಯಾಸೆಗಾಗಿ ಬಿಟ್ಟುಹೋದ ತಂದೆ,
ನಮ್ಮ ಪಾಲಿಗೆ ಬರುವುದಿಲ್ಲವೆಂದು.

ಸಂತೆಯೊಳಗಿನ ಕನಿಕರದ ನೋಟ ಬೇಕಾಗಿಲ್ಲ,
ತಂದೆ ತೊರೆದು ಹೋಗುವಾಗ, ನಮ್ಮೊಂದಿಗೆ ನಿಲ್ಲಿಸಿದವರಿಲ್ಲ
ಉಮ್ಮನೊಂದಿಗೆ ಕಷ್ಟ ಕೇಳಿದವರಿಲ್ಲ,
ಅದಕ್ಕಾಗಿಯೇ ,ಯಾರ ಅನುಕಂಪವೂ ನನಗಿಷ್ಟವಿಲ್ಲ.

ಹೌದು ,ನನ್ನ ಚಹಾ ಮುಗಿಯಬೇಕು ,
ಚಹಾದಿಂದ ನಮ್ಮ ಜೀವನ ಸಿಹಿಯಾಗಬೇಕು .
ಕೆಲಸಕ್ಕೆ ಬಂದ ಗುಜರಾತಿಯಿಂದಲೋ,
ಊರು ಗೊತ್ತಿಲ್ಲದ ಯಾವನಿಂದಲೋ
ತಾಯಿಗಾದಂತೆ ಆಗದಿರಲು ,
ತಂಗಿಯಂದಿರ ಮೆಟ್ಟಿ ನಿಲ್ಲಿಸಬೇಕು.

ನನಗೆ ಸಮಯವಿಲ್ಲ ,
ಚಹಾ ಮುಗಿಯಬೇಕು ,
ಅದರಿಂದಲೇ ಉಮ್ಮ, ಒಡಹುಟ್ಟಿದವರ;
ಹೊಟ್ಟೆ ತುಂಬಬೇಕು.

Comments