ಮೆಹರ್ (ಕಥಾ ಅಂಗಳ)

-ಬಾಪು ಅಮ್ಮೆಂಬಳ
'ಆಚೆ ಮನೆಯ ಫಾತಿಮಾಳಿಗೆ ಮದುವೆ ,ಐವತ್ತು ಪವನ್ ಚಿನ್ನ ಎರಡುವರೆ ಲಕ್ಷ ಕಾಸಿ ' ಎಂದಾಗ ಹಾಮದಾಕ ಮನೆಯೋಳಗೆ ಕಾಲಿಡುತ್ತಿದ್ದರು . 'ಒಳ್ಳೆಯ ವಿಷಯ' ಹಾಮದಾಕ ನಸು ನಕ್ಕರು. 'ಒಳ್ಳೆಯ ವಿಷಯ ಹೌದು, ನಮಗೂ ಮದುವೆಯ ವಯಸ್ಸಿನ ಮಗಳಿದ್ದಾಳೆ ,ಅವಳ ಮದುವೆಗೆ ಅಂತ ಒಂದು ಪವನ್ ಚಿನ್ನನೂ ಮಾಡಿಸಿಲ್ಲ , ದುಡಿದದ್ದು ಎಲ್ಲಾ ದಾನ , ಪರೋಪಕಾರ ಎಂದು ವ್ಯಯಿಸಿದರೆ ನಮಗೇನು ಉಂಟು' ಎಂದಾಗ 'ನಮಗೆ ಅಲ್ಲಾಹನಿದ್ದಾನೆ' ಎಂದು ಹಾಮದಾಕ ಮಾತು ಮುರಿದರು . ಮನೆಯೊಳಗೆ ಹೋದವರೇ ವುಳೂ ಮಾಡಿ ನಮಾಜಿಗೆ ನಿಂತರು.
    ಹಾಮದಾಕ ಒಂದು ಸಮಯದಲ್ಲಿ ಊರಿನ ದೊಡ್ಡ ಶ್ರೀಮಂತರಾಗಿದ್ಥರು, ಯಾರಿಗೂ ಇಲ್ಲವೆಂದವರಲ್ಲ .ಸ್ನೇಹಿತರು ಸಂಬಂದಿಕರು ನಿನಗೆ ಅಂತ ಸ್ವಲ್ಪ ಉಳಿತಾಯ ಮಾಡು ಅಂದಾಗೆಲ್ಲಾ , 'ಅಲ್ಲಾಹನಿದ್ದಾನಲ್ಲಾ' ಎಂದೇ ಹೇಳುತ್ತಿದ್ದರು
    ಹಾಮದಾಕ ನಮಾಜು ಮುಗಿಸಿ ಹೆಂಡತಿಯನ್ನು ಕರೆದು 'ನಾಳೆ ಮಗಳನ್ನು ನೋಡಲು ಗಂಡಿನ ಕಡೆಯವರು ಬರುತ್ತಿದ್ದಾರೆ' ಎಂದಾಗ ಆಮಿನಾದರಿಗೆ ಎಲ್ಲಿಲ್ಲದ ಸಂತೊಷ 'ಹೌದಾ ಎಲ್ಲಿಯವರು ?' ಎಂದಾಗ 'ಏನು ಡಿಮ್ಯಾಂಡಂತೆ' ಮೆಲ್ಲನೆ ಕೇಳುತ್ತಾರೆ . 'ನನ್ನ ಪರಿಚಯದವರೇ ಖಾದರ್ ಹಾಜಿ ಯವರ ಮೊದಲ ಮಗನಿಗೆ, ಹುಡುಗ ಇಂಜಿನಿಯರ್ ಒಳ್ಳೆಯ ಗುಣವಂತ  ,ಡಿಮ್ಯಾಂಡ್ ಗೊತ್ತಿಲ್ಲಾ ಹುಡುಗಿ ಹಿಡಿಸಿದರೆ ಮತ್ತಿನ ಮಾತಲ್ವ ಅಲ್ಲಾಹನಿದ್ದಾನೆ' ಎನ್ನಲು ಹಾಮದಾಕ ಮರೆಯಲಿಲ್ಲ.
    ಮರುದಿನ ಖಾದರ್ ಹಾಜಿ ಮತ್ತು ಅವರ ಹೆಂಡತಿ ಇಬ್ಬರೇ ಬಂದಿದ್ದರು. ಹಾಮದಾಕನ ಮಗಳು ಅಷ್ಟೇನು ಸುಂದರಿ ಅಲ್ಲದಿದ್ದರು ಸದ್ಗುಣಿಯಾಗಿದ್ದಳು.  ಹಾಜಿಯಾರರ ಹೆಂಡತಿ ಹುಡುಗಿಯನ್ನು ನೋಡಿ ಕಣ್ಣಲ್ಲೇ ಮೆಚ್ಚುಗೆ ಪಡಿಸಿದರು . ಖಾದರ್ ಹಾಜಿಯವರು ದೀನಿವಂತರಾಗಿದ್ದರು ಯಾವುದೇ ಕಾರ್ಯದಲ್ಲಿ ದೀನಿಗೆ ವಿರುದ್ದವಾಗಿ ನಡೆದವಲ್ಲ. ಹುಡುಗಿ ನೋಡಿದ ಹಾಜಿಯಾರ್ರ ಹೆಂಡತಿ  ಹೊರಗಡೆ ಬಂದು ಗಂಡನ ಹತ್ತಿರ ಬಂದು 'ನಮ್ಮ ಮಗನಿಗೆ ತಕ್ಕ ಹುಡುಗಿ , ಹುಡುಗಿ ಒಪ್ಪಿಗೆ' ಎಂದು ನಕ್ಕರು . ಹಾಮದಾಕ ಹಾಜಿಯವರ ಮುಖ ನೋಡಿ 'ನಿಮ್ಮ ಡಿಮಾಂಡ್ ಏನಾದರು......'ಎಂದು ರಾಗವೆಳೆದಾಗ ,ಒಳಗಿನಿಂದ ಆಮಿನಾದ ಮೈಯೆಲ್ಲಾ ಕಿವಿಯಾಗಿಸಿದರು. ಹಾಜಿಯಾರ್  'ಡಿಮಾಂಡ್ ಹಾ ಹೌದು ಏನು ಅಪೇಕ್ಷೆ ಮಾಡುತ್ತೀರ' ಎಂದಾಗ ಹಾಮದಾಕರಿಗೆ ಕಸಿವಿಸಿ. 'ಏನು ಹೇಳುತ್ತಿದ್ದೀರ ಹಾಜಿಯಾರೆ ?' 'ಹೌದು ಹಾಮದಾಕ ಹೆಣ್ಣು ನಿಮ್ಮದೆಂದಾಗ ಏನು ಮಹರ್ ಅಂದರೆ ವಧುದಕ್ಷಿಣೆ ನೀವು ಅಪೇಕ್ಷೆ ಮಾಡ್ತೀರ' ಎಂದಾಗ ಹಾಮದಾಕರ ಕಣ್ಣುಗಳಲ್ಲಿ ನೀರು ಜಿನುಗುತ್ತಿತ್ತು .ಮನಸ್ಸು ಅಲ್ಲಾಹನಿಗೆ ಸಾಷ್ಟಾಂಗವೆರಗುತ್ತಿತ್ತು.

Comments