-ಬಾಪು ಅಮ್ಮೆಂಬಳ
ನಮಸ್ತೇ ,ಗುಡ್ಮಾರ್ನಿಂಗ್ ಬನ್ನಿ ಬನ್ನಿ
ಇದು ನಮ್ಮೂರಿನ ಮಸೀದಿ
ರಿಫಾಯಿ ಮಸೀದಿ ಎಂದೆಸರು
'ರಿಫಾಯಿ' ಎಂಬ ಸಂತನ ಹೆಸರಿಟ್ಟಿದ್ದಾರೆ
ಊರಿನ ಹಿರಿಯರು
ಇದು ನೀರಿನ ಹೌಳ್
ಹೌಳ್ ಎಂದರೆ ನೀರಿನ ತೊಟ್ಟಿ ಎಂದರ್ಥವಿರಬಹುದು
ಚಪ್ಪಲಿಯಿಲ್ಲೇ ಇಟ್ಟು ಬಿಡಿ
ಕೈಕಾಲು ಮುಖ ತೊಳೆದು ಒಳಗೆ ಬನ್ನಿ .
ಬನ್ನಿ ಮಸೀದಿಯೊಳಗೆ ಹೃದಯ ತೊಳೆಯುವ !!
ಒಳಗಡೆ ಮಾತೆತ್ತಲಾರೆ ,
ಪ್ರಾರ್ಥನೆ, ದೇವಸ್ಮರಣೆ ಮಾತ್ರ ಮಾಡಬೇಕೆಂದಿದ್ದಾರೆ ಇಮಾಮರು
ನೋಡಿ ಕೊಂಡು ಬನ್ನಿ ಹೊರಗಡೆ ಮಾತಾಡುವ .
ಓಹೋ ,ನೋಡಿ ಬಂದ್ರಾ ಬನ್ನಿ
ಮಸೀದಿಯೊಳಗಿನ ಎದುರಿನ ಸ್ಥಳವಿದೆಯಲ್ಲ
ಅದಕ್ಕೆ ಮಿಹ್ರಾಬ್ ಎನ್ನುತ್ತಾರೆ
ಇಮಾಮರು ಅಲ್ಲೇ ನಿಂತು ಪ್ರಾರ್ಥನೆಗೆ ನೇತೃತ್ವ ನೀಡುತ್ತಾರೆ
ಹಾಂ ಏನಂದಿರಿ ??
ಹೂಂ ನಾವೂ ಅಲ್ಲಿ ನಿಲ್ಲಬಹುದು
ಪ್ರಾರ್ಥನೆಯೂ ಮಾಡಬಹುದು.
ಎರಡು ಪಿಲ್ಲರುಕಂಬಗಳು ಮಸೀದಿ ನಿಲ್ಲಲು
ಉದ್ದದ ಚಾಪೆಗಳು ಪ್ರಾರ್ಥನೆಗೆ ನಾವು ನಿಲ್ಲಲು
ಗೋಡೆಯ ರ್ಯಾಕಿನಲ್ಲಿ ಅರಬಿಲಿಪಿಯ ಪವಿತ್ರ ಕುರಾನ್
ಅರ್ಥ ಆಗದಿದ್ದರೂ ಓದಿದರೆ ಪುಣ್ಯವಿದೆಯಂತೆ
ಅರ್ಥ ಕಲಿಯಬೇಕೆಂದಿದ್ದೇನೆ ಅಲ್ಲಾಹನಿಚ್ಛಿಸಿದರೆ
ಮತ್ತೇನಿದೆ ಮಸೀದಿಯಲ್ಲಿ ,
ಪ್ರಾರ್ಥಿಸುವ ತುಟಿಗಳು
ದೇವಸ್ಮರಣೆ ಮಾಡುವ ಜಪಮಣಿಗಳು.
ಓಹ್ ,ಅಝಾನ್ ಕೇಳ್ತಿದೆ
ಒಂದೆರೆಡು ನಿಮಿಷ ಮಾತನಾಡಲಾರೆ ಕ್ಷಮಿಸಿ
ಹಾ ಅಝಾನ್ ಮುಗಿಯಿತು
ಇನ್ನೇನು ಹತ್ತು ನಿಮಿಷದಲ್ಲಿ ನಮಾಜಿಗೆ ಕರೀತಾರೆ .
ನಮಾಜಿನ ನಂತರ ಇಮಾಮರು ಪ್ರಾರ್ಥಿಸುತ್ತಾರೆ
ತಂದೆತಾಯಿಗೆ , ಅಧ್ಯಾಪಕರೆಲ್ಲರ
ಒಳಿತಿಗಾಗಿ ತಪ್ಪದೇ ಪ್ರಾರ್ಥಿಸುತ್ತಾರೆ ,
ನಮ್ಮ ಪಾಪಗಳ ಮನ್ನಿಸಲೂ ಪ್ರಾರ್ಥಿಸುತ್ತಾರೆ ,
ಕೆಲವೊಮ್ಮೆ ಗಳಗಳನೇ ಅಳುತ್ತಾರೆ .
ಅಲ್ಲಿ ನೋಡಿ ಮುಗಿಲಿಗೆ ಚುಂಬಿಸುತ್ತಿದೆಯಲ್ಲ ,
ಅದಕ್ಕೆ ಮಿನಾರ ಎನ್ನುತ್ತೇವೆ
ಇದಕ್ಕೆ ಗುಂಬಜ್ ಅನ್ನುತ್ತೇವೆ
ಇದು ಇರಲೇ ಬೇಕೆಂದಿಲ್ಲ ಕೇವಲ ಅಲಂಕಾರಿಕ ಅಷ್ಟೆ ,
ಇಷ್ಟೆ ನಮ್ಮೂರಿನ ಮಸೀದಿ ಇಷ್ಟೆ ,
ಬನ್ನಿ ಅಲ್ಲಿ ಒಟ್ಟಿಗೆ ಚಾ ಕುಡಿಯುವ
ನಮ್ಮ ಇಮಾಮರೂ ಇದ್ದಾರೆ .
Comments
Post a Comment