ಕಾಶ್ಮೀರದವಳ ನೆನಪಿನಲಿ

-ಬಾಪು ಅಮ್ಮೆಂಬಳ
ಒಂದೇ ನೋಟದಲಿ ಪ್ರೇಮ ಚಿಗುರೊಡೆದಿತ್ತು...!!
ಮಿಂಚುವ ಹೊಂಬಣ್ಣದ ಹುಡುಗಿಯ ,
ನೀಲಿಕಣ್ಣಲಿ ಜನ್ಮಜನ್ಮಾಂತರ ಅನುರಾಗವಿತ್ತು.
ಕಾಶ್ಮೀರ ಕಣಿವೆಯ ಆ ಮುಸ್ಸಂಜೆಯ ದಿನ,
ಮಂದಿರದ ಗೋಪುರದಿಂದ ಮೊಳಗುತ್ತಿದ್ದ
ಶಾಂತಿಮಂತ್ರ ಕರ್ಣಗಳಿಗೆ ಶಾಂತವಾಗಿತ್ತು.

ಪ್ರೇಮವಾಗ ಚಿನಾರ್ ಗಿಂತ ಹೆಮ್ಮರವಾಗಿತ್ತು ,
ಹೃದಯ ಅವಳ ಕಿವಿಯೋಲೆಯ
ಸದ್ದನ್ನೇ ಬಿಡದೇ ಘಲ್ಲೆನಿಸುತ್ತಿತ್ತು.
ಸ್ತೂಪಗಳ ಶರಣಂ ಗಚ್ಛಾಮಿ
ಕಣಿವೆಯುದ್ದಕ್ಕೂ ಪ್ರತಿಧ್ವನಿಸಿದ್ದು ಕೇಳಿಸುತ್ತಿತ್ತು.

ಕುಡಿಯಲು ಕೊಟ್ಟ ಬಿಸಿ ಕಾಹ್ವಾಹ್ ನಲ್ಲಿ
ಉತ್ಕೃಷ್ಠ ಕೇಸರಿಯೊಂದಿಗೆ ಒಲವಿನ ಸಿಹಿಯಿತ್ತು .
ನಡುಗುವ ಚಳಿಗೂ ಅದು ಬೆಚ್ಚಗಿರಿಸಿತ್ತು.
ಅವಳಿಗೆ ಸುರಿವ ಮಂಜನ್ನೆತ್ತಿಟ್ಟು
ಕುಸುರಿ ಕಟ್ಟುವ ದಾವಂತವಿತ್ತು.!
ಮಸೀದಿ ಮಿನಾರದ ದೇವಸ್ಮರಣೆ
ಹೃದಯದಾಳದಿಂದಲೂ ಪ್ರತಿಧ್ವನಿಸುತ್ತಿತ್ತು.

ಕಣಿವೆಯ ಕೇಸರಿಯ ಹೊಲಗಳ ನಡುವಿನ
ಓಕ್ ಮರಗಳ ಕಾಂಡಗಳಲ್ಲಿ
ನಮ್ಮಿಬ್ಬರ ಹೆಸರುಗಳು ಕೆತ್ತಲ್ಪಟ್ಟಿತ್ತು ,
ತಣ್ಣಗಿನ ಕಣಿವೆಗಳು ಪ್ರೇಮಗೀತೆಗಳನ್ನಷ್ಟೇ ಪಿಸುಗುಡುತ್ತಿತ್ತು.

ಆಲೂದಮ್ ಗಳಲಿ ,ರೋಗನ್ ಜೋಶ್ ಗಳಲಿ
ಹಬ್ಬಗಳ ವಾಜ್ವಾನ್ ಗಳಲಿ ಒಲವಿನ ಸ್ವಾದವಿತ್ತು .
ಕಣಿವೆಯೂರಿನ ನೀಲಿಗಣ್ಣಿನ ಚೆಲುವೆಯಲ್ಲಿ
ಚಿಮ್ಮುವ ಪ್ರೀತಿಯ ಕಾರಂಜಿಯಿತ್ತು.

ಹಾ ಹಾಗೆಲ್ಲಾ ಇತ್ತು....ಆದರೆ....!!

ನನ್ನವಳ ಕಣಿವೆಯೂರು ಸ್ವರ್ಗವಾಗಿತ್ತು ;ಯಾರ ದಾಹವಿತ್ತೋ....
ಈಗೀಗ ಕಣಿವೆಯ ಹೊಲಗಳಲ್ಲಿ
ಮದ್ದುಗುಂಡುಗಳ ಬೀಜ ಬಿದ್ದಿವೆ.
ಓಕ್ ಮರದ ಕಾಂಡದಲ್ಲಿದ್ದ ಹೆಸರು
ಸುಟ್ಟು ಕರಕಲಾಗಿ ವಿರೂಪಗೊಂಡಿದೆ.
ನನ್ನ ಹುಡುಗಿಯ ಕಣಿವೆಯೂರಿನ
ಉದ್ದಕ್ಕೂ ಹಸಿ ರಕ್ತ  ಹೆಪ್ಪುಗಟ್ಟಿದೆ

ನನ್ನ ಹುಡುಗಿಯ ಕಿವಿಯೋಲೆಗಳು
ಗ್ರೇನೇಡ್ ಸದ್ದುಗಳಿಗೆ ಉದುರಿಬಿದ್ದಿವೆ .
ಉಣ್ಣೆಯಂತ ಹೃದಯ ಪ್ರೇಮ ತರಂಗವಿಲ್ಲದೆ
ಕಲ್ಲಿನಂತೆ ಗಟ್ಟಿಗೊಂಡು ಬಿಕರಿಯಾಗಿದೆ.

ಕಣಿವೆಯೂರಿನ ದಾರಿಯ ಮಂಜಿನ ಮೇಲೆ
ಪ್ರೀತಿ ಸತ್ತು ಸಾಲುಸಾಲಾಗಿ ಮಲಗಿದೆ.
ಮಂಜಿನಲ್ಲಿದ್ದ ಪ್ರೀತಿ ಕರಗಿ ರಕ್ತದ
ಹೊಳೆಯಾಗಿ ಕಣಿವೆಯ ಉದ್ದಕ್ಕೂ ಹರಿದಿದೆ.
ಹೊಂಬಣ್ಣದ ನೀಲಿ ಕಣ್ಣಿನ ಹುಡುಗಿ
ಮಾತು ಮುರಿದು ಮೌನವಾಗಿದ್ದಾಳೆ ,ಕಣ್ಣುಮುಚ್ಚಿದ್ದಾಳೆ;
ಅವಳೊಂದಿಗೆಯೇ ಶಾಂತಿ ಭೋದಿಸುವ ಎಲ್ಲರೂ ಸತ್ತುಹೋಗಿದ್ದಾರೆ.

2016

Comments