ಕವಿತೆಯ ಜನನ...!!

-ಬಾಪು ಅಮ್ಮೆಂಬಳ
ಕವಿ ನೇಸರನ ಹಿಡಿಯ ಹೊರಟ ;
ವರುಣ ಅಡ್ಡ ಬಂದು ,
ರಂಗಿನ ಬಿಲ್ಲನು ಎದೆಗೇರಿಸಿ
ಅಂಬಿಗಾಗಿ ಅಲೆಡಾಡ ತೊಡಗಿದ....!
      -------
ಬಿಲ್ಲೇ ಕಾಮನಿಂದ ಎರವಲು ಪಡೆದಿದ್ದು...!
ಒಂದಿಷ್ಟು ಮಳೆಹನಿ ಕೊಟ್ಟು .
ಉಳಿದ ಮಳೆ ಹನಿಯ ನಂಬಿ
ಬಾಣವ ಕೊಡುವ ಗಟ್ಟಿಗ ಯಾರಿದ್ದಾರೆ ...!?
      -------
ವರುಣ ಅಸಹಾಯಕ ಪಾಪ
ಕವಿ ರೆಕ್ಕೆ ಕಟ್ಟಿ ಹಾರುತ್ತಿದ್ದಾನೆ.
ರವಿಗೆ ಉಭಯ ಸಂಕಟ
ಅಂಬರದಿಂದ ಕಿತ್ತೇ ಬಿಡುತ್ತಾನೆಂಬ ಭಯ.
      -------
ಹಾ ಉಪಾಯ ಬಂತು ವರುಣನಿಗೆ ,
ಮೆಲ್ಲನೆ ಹನಿಮುತ್ತನು ಚೆಲ್ಲಿ;
ಭುವಿಯ ರಮಿಸಲು ಹೊರಟ .
ಗರಿಬಿಚ್ಚಿ ನಲಿಯಿತು ನವಿಲು .
      -------
ಇಷ್ಟೇ ಸಾಕು ,ಉಪಾಯ ಫಲಿಸಿತು..!
ಚೆಲ್ಲಿದ ಮುತ್ತನು ಹೆಕ್ಕಿ,
ಕವಿತೆ ಕಟ್ಟಲು ಭಾವಪರವಶನಾದ ಕವಿ.
ರೆಕ್ಕೆ ಮುದುಡಿತು ,ಕವಿ ಮನ ಅರಳಿತು..!
      -------
ಕಣ್ಣಾರೆ ಕಂಡ ನೇಸರ ನಾಚಿ ಕೆಂಪಾದ ,
ಭುವಿ ಹಸಿರಾಗಿ ಬಸಿರಾದಳು
ವರುಣ ಹೆದರಿ ಊರು ಬಿಟ್ಟ
ಕವನ ಊರ ತುಂಬಾ ಕಂಪೇರಿತು.

Comments