-ಬಾಪು ಅಮ್ಮೆಂಬಳ
ರಂಜಾನಿನ ಸಮಯ .'ಆತ' ಕಡುಬಡವ ,ಸರಿಯಾಗಿ ಉದ್ಯೋಗ ಇಲ್ಲದವನು,ಯಾವಾಗಲೂ ಹರಿದ ಅಂಗಿ ಹಾಕಿದ ಆತ ತುಂಬಾ ಕಡುಬಡವನಂತೆ...
ಇವರು ಊರಿನ ಉದಾರಿ ಶ್ರೀಮಂತರು.ಊರಿನ ಕಡುಬಡವನಿಗೆ 'ರಂಜಾನ್ ಕಿಟ್' ಕೊಟ್ಟು ,ಫೋಟೋ ತೆಗೆಸಿ ಮಾಧ್ಯಮಗಳಲ್ಲಿ ರಾರಾಜಿಸಿದರು .ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ದಿಯಾದರು ,ಸಹೃದಯಿ ಅನ್ನಿಸಿಕೊಂಡರು.ಕಡುಬಡವನೋ ಬಂದ ಬಂದವರಲ್ಲಿ ಅವರ ಗುಣಗಾನ ಮಾಡಿ ಅವರಿಂದಲೂ ದಕ್ಕಿಸಿಕೊಂಡನು.ಒಂದು ವರ್ಷ ಕುಳಿತು ತಿಂದು ಉಳಿದದ್ದನ್ನು ಮಾರಿ ಹಣ ಕಿಸೆಗಿಳಿಸಿದನು .ಆತ ಮಾತ್ರ ಇನ್ನೂ ಕಡುಬಡವ.
'ಈತ' ಬಡವನಲ್ಲ ,ಉದ್ಯೋಗ ಇರುವವನು ಯಾವಾಗಲೂ ನೀಟಾದ ಬಟ್ಟೆಯನ್ನು ಧರಿಸಿ ಓಡಾಡುವವನು .ಮರ್ಯಾದಸ್ಥ ,ಯಾರಿಂದಲೂ ಚಿಕ್ಕಾಸನ್ನೂ ಪಡೆಯದವನು ,ಸಾಲವನ್ನೂ ಕೇಳದವನು .ಇವನು ಬಡವನಲ್ಲ.
ಇನ್ನೊಬ್ಬ ಕಡುಜಿಪುಣ .ಯಾರಿಗೂ ಪುಡಿಗಾಸು ಕೊಟ್ಟ ಇತಿಹಾಸವಿಲ್ಲ.ಊರಿನ ಕಡುಬಡವನಿಗಂತು ಕೊಟ್ಟೇ ಇಲ್ವಂತೆ.
ಕಡುಜಿಪುಣ ರಾತ್ರಿಯ ಸಮಯದಲ್ಲಿ ಬಡವನಲ್ಲದ 'ಈತ'ನ ಮನೆಗೆ ಬಂದು, ಯಾರಿಗೂ ತಿಳಿಯದಂತೆ ರಂಝಾನ್ ಕಿಟ್ಟನ್ನು ಕೊಟ್ಟು ತನ್ನಷ್ಟಕ್ಕೆ ಹೊರಟುಬಂದ. 'ಈತ' ಇದರ ಬಗ್ಗೆ ಯಾರಲ್ಲೂ ಹೇಳದೇ ,ರಂಜಾನಿನ ಸಮಯವನ್ನು ಜಿಪುಣನ ಕಿಟ್ಟಿನಿಂದಲೇ ಸರಿದೂಗಿಸಿ ,ಉಳಿದ ತಿಂಗಳಿನಲ್ಲಿ ತನ್ನ ಇಸ್ತ್ರಿ ಮಾಡಿದ ನೀಟಾದ ಧಿರಿಸು ಧರಿಸಿ ಬರಿಹೊಟ್ಟೆಯಲ್ಲೇ ಜೀವಿಸತೊಡಗಿದ.ಆದರೆ ಈತ ಬಡವನಲ್ಲ .ಜಿಪುಣ ಮಾತ್ರ ಈಗಲೂ ಕಡುಜಿಪುಣನೇ.
Comments
Post a Comment