-ಬಾಪು ಅಮ್ಮೆಂಬಳ
ನಾ ಬಿದ್ದರೆ ಉಮ್ಮ ಕಣ್ಣೀರಾಗುತ್ತಾರೆ ,
ಅಬ್ಬ ಒಮ್ಮೆಯೂ ಅತ್ತಿದ್ದಿಲ್ಲ .!!
__________
ಅಬ್ಬ ಕಡುಕೋಪಿಷ್ಟ ;
ನಾ ಪ್ರತಿ ಸಾರಿ ಎಡವಿದಾಗಲೂ
ನನ್ನ ಬೆನ್ನು ತಟ್ಟಿ ಗದರಿಸಿಯೇ ಮೇಲೆತ್ತುತ್ತಾರೆ .
__________
ಅಬ್ಬ ಅದೆಷ್ಟು ತ್ಯಾಗಿಯೆಂದರೆ ,
ದೊಡ್ಡ ಮಗನಾದ ನನ್ನಲ್ಲಿ
ಅವರನ್ನೇ ಹುಡುಕುತ್ತಾರೆ
ಆದರೂ 'ನೀನು ನಿನ್ನ ಕನಸನ್ನಷ್ಟೇ ಸಾಧಿಸು' ಅನ್ನುತ್ತಾರೆ .
__________
ನಾ ದಾರಿ ತಪ್ಪಿದಾಗ ತಾರುಮಾರು ಬೈದುಬಿಡುತ್ತಾರೆ ,
ಆದರೆ;
ಉಮ್ಮ ಹೇಳುತ್ತಾರೆ,
ರಾತ್ರಿಯಿಡೀ ಅವರು ನಿದ್ದೆ ಮಾಡಿಯೇ ಇಲ್ಲ ...!!
__________
ಅಬ್ಬನಿಗೂ ನನ್ನ ಹಾಗೆ ;
ಅಲ್ಲಲ್ಲ ನನಗಿಂತ ದೊಡ್ಡ ದೊಡ್ಡ ಕನಸುಗಳಿತ್ತು ,
ಅವರು ಬೇಡವೆಂದು ಎಸೆದಿದ್ದ ಅವರ ಡೈರಿಯನ್ನು ,
ನಾನೊಂದು ದಿನ ಕದ್ದು ಓದಿದ್ದೆ ,
ಆದರೆ ಇವತ್ತು 'ನೀವೇ ನನ್ನ ಕನಸು' ಎಂದು
ಸುಳ್ಳು ಸುಳ್ಳೇ ಹೇಳುತ್ತಾರೆ .
Comments
Post a Comment