ನನ್ನ ಬಗ್ಗೆ ಬೇಜಾರಿರಬಹುದು ನಿಮಗೆ...

-ಬಾಪು ಅಮ್ಮೆಂಬಳ
ನನ್ನ ಬಗ್ಗೆ ಬೇಜಾರಿರೆನಿಸಬಹುದು ನಿಮಗೆಲ್ಲ ,
ಅತಿಯಾಯಿತೆಂದೂ ಅನಿಸದಿರದು ,
ಖಂಡಿತಾ ಅದಕ್ಕಾಗಿ ನಾನೇನೂ ಮಾಡಲಾರೆ , ಕ್ಷಮಿಸಿಬಿಡಿ .!!
ಯಾಕೆಂದರೆ ,
ನಾ ಪ್ರೀತಿಸ ಬಯಸುತ್ತಿದ್ದೇನೆ  ; ಜೀವಕ್ಕಿಂತಲೂ ಹೆಚ್ಚಾಗಿ !!

ಆ ದಿನ 'ತಾಯಿಫಿ'ನ ಅನೇಕಾನೇಕ ಜನ,
ಅವರನ್ನು  ಹುಚ್ಚನೆಂದರು ,
ಗೇಲಿ ಮಾಡಿ ಕಲ್ಲೆಸೆದರು , ರಕ್ತವೂ ಚೆಲ್ಲಿತು ,
ಅವರ್ಯಾರೂ ಶಪಿಸಲ್ಪಡಲಿಲ್ಲ , ಮರ್ದಿಸಲ್ಪಡಲಿಲ್ಲ ಕ್ಷಮಿಸಲ್ಪಟ್ಟರಷ್ಟೆ .

ದಿನಾ ಕಸವೆಸೆದು ತಮಾಷೆ
ನೋಡುತ್ತಿದ್ದವರೂ ಕ್ಷಮಿಸಲ್ಪಟ್ಟರು .
ಪ್ರಾರ್ಥನಾ ಸಮಯ  ಕೊಳೆತ ಕರುಳ ,
ಹಾರಮಾಡಿ ಸನ್ಮಾನಿಸಿದವರೂ ಕ್ಷಮಿಸಲ್ಪಟ್ಟರು ,
ನಾನವರ ಪ್ರೀತಿಸುತ್ತಿದ್ದೇನೆ , ಇನ್ನೂ ಇನ್ನೂ ಪ್ರೀತಿಸಲು ಪ್ರಯತ್ನಿಸುತ್ತಿದ್ದೇನಷ್ಟೆ  .

ಮಾಟಗಾರನೆಂದರು , ಹುಟ್ಟೂರಲ್ಲೇ ಬಹಿಷ್ಕರಿಸಲ್ಪಟ್ಟರು ,
ಕೊಲ್ಲಲೂ ಉಪಾಯವಾಯಿತು ,
ಶಾಂತಿಯಷ್ಟೇ ನನ್ನದೆಂದು ಹುಟ್ಟೂರನ್ನೇ ತೊರೆದರು ,
ಇವರನ್ನೇ ಪ್ರೀತಿಸಬೇಕೆಂದಿದ್ದೇನೆ .

ಹೇ ತಪ್ಪು ತಿಳಿಯದಿರಿ ,ಅವರೇನು ಹೇಡಿಯಲ್ಲ ,
ಆ ಊರಿನ ಕುಲೀನ ವಂಶದವರು ,
ಜೀವ ಕೊಡುವ 'ಸಂಗಾತಿ'ಗಳಿದ್ದರು
ಶಾಂತಿಯಷ್ಟೇ ಬೇಕಿತ್ತು ,ಸಹನೆಯೇ ಆಯುಧವಾಗಿತ್ತವರಿಗೆ
ಪ್ರೀತಿಸಬೇಕಿಂದಿದ್ದೇನೆ ,ಜೀವಕ್ಕಿಂತಲೂ ಹೆಚ್ಚಾಗಿ

ಸಾವಿರ ವರ್ಷಗಳಿಂದ ಬುಸುಗುಡುತ್ತಿದ್ದ ,
ಮನಸ್ಸುಗಳ ಜೋಡಿಸಿದವರು .
ಅಮೂರ್ತ ದೇವನ ಸಿದ್ದಾಂತದವರಾಗಿದ್ದರೂ ,
ಕಾಲಡಿಯಲಿ ಬಿದ್ದ ಮೂರ್ತಿಯ ಎತ್ತಿಟ್ಟು,
'ಎಂದಿಗೂ ನಾ ಹೃದಯಕ್ಕೆ ತುಳಿಯೆ' ಎಂದವರು .
ಇವರನ್ನು ಪ್ರೀತಿಸಬೇಕೆಂದಿದ್ದೇನೆ .

ಹೆಣ್ಣೆಂದರೆ ಜೀವಂತ ಸಮಾಧಿ ಮಾಡುವವರೊಂದಿಗೆ ,
ಸ್ವರ್ಗದ ಬಯಕೆಯಿದ್ದರೆ ಹೆಣ್ಣಿನ ಪಾದದಡಿ ಹುಡುಕಿಯೆಂದವರು .
ಮದ್ಯವೇ ಸರ್ವಸ್ವವೆಂದು ರಸ್ತೆಯುದ್ದಕ್ಕೂ ಹಾಡಿದವರ,
ಅದೇ ರಸ್ತೆಯುದ್ದ ಮದ್ಯದ ಕಾಲುವೆ ಹರಿಯುತ್ತಿದ್ದರೂ ,
ಒಂದಿಷ್ಟೂ ಖೇದಿಸದಂತೆ ಬದಲಾಯಿಸಿದವರವರು .
ಪ್ರೀತಿಸಿದರೆ ತಪ್ಪೇನು ??

ಬಾಪೂ ಗಾಂಧಿ , ವಿವೇಕಾನಂದರು ,
ಅಷ್ಟೇ ಏಕೆ ವಿಶ್ವದ ಗೌರವಾನ್ವಿತರೆಲ್ಲರೂ
ಓದಿದ ಆತ್ಮವದು .
ಇತಿಹಾಸದ ಅಂಧಕಾರ ಯುಗವ ,
ವೈಚಾರಿಕತೆಗೆ ತಂದು ಬೆಳಗಿಸಿದವರು ,
ಹೌದು ಪ್ರೀತಿಸಬೇಕೆಂದಿದ್ದೇನೆ !

ಮೊನ್ನೆ ಮೊನ್ನೆ ಕೇರಳದಲ್ಲಿ
ಅವರ ಕೀಳಾಗಿ ಬರೆಸಲಾಯಿತೆಂದು ,
ಬರೆದವನ ಕೈಕಡಿದು ಗೆಲುವಾದರು,
'ಚಾರ್ಲೀ ಹೆಬ್ಡೋ' ಏನೇನೋ ಹೇಳಿತೆಂದು ಬಾಂಬ್ ಹಾಕಿ ಸಂಭ್ರಮಿಸಿದರು ,
ನಿಜ ಹೇಳುತ್ತೇನೆ ಕೇಳಿ ,
ಅಕ್ರಮಿಸಿದವರೆಂದು ಅವರ ಪ್ರೀತಿಸಿಯೇ ಇರಲಿಲ್ಲ ,
ಪ್ರೀತಿಸಿದ್ದೇ ಆಗಿದ್ದರೆ ಕ್ಷಮಿಸುತ್ತಿದ್ದರು .

ನನ್ನ ಬಗ್ಗೆ ಬೇಜಾರಿರೆನಿಸಬಹುದು ,
ಅತಿಯಾಯಿತೆಂದೂ ಅನಿಸದಿರದು ,
ಖಂಡಿತಾ ಅದಕ್ಕಾಗಿ ನಾನೇನೂ ಮಾಡಲಾರೆ , ಕ್ಷಮಿಸಿಬಿಡಿ .
ಯಾಕೆಂದರೆ ,
ನನ್ನ ಹಬೀಬರ ಪ್ರೀತಿ ಬಯಸುತ್ತಿದ್ದೇನೆ , ಜೀವಕ್ಕಿಂತಲೂ ಹೆಚ್ಚಾಗಿ !

Comments

  1. ಬಾಪು ಸೂಪರ್......
    ಪದಗಳಿಲ್ಲ .....‌‌
    ಸೂಪರ್......

    ReplyDelete

Post a Comment