ಕೋಮುವಾದಿ ಸಾಲುಗಳು

-ಬಾಪು ಅಮ್ಮೆಂಬಳ                   

ನಾನು ಶಿವಪ್ಪಜ್ಜನನ್ನು ತುಂಬಾ ದ್ವೇಷಿಸುತ್ತೇನೆ ,
ಕಾರಣ...!!??
ಕಾರಣ ತುಂಬಾ ಇದೆ ,
ಕಥೆ ಹೇಳುತ್ತೇನೆ ಕೇಳಿ ..!

'ಅಬ್ಬ'ನಿಗೆ ಸಂಪಾದನೆಯಿಲ್ಲದ ವೇಳೆಯದು
'ಅಬ್ಬ' 'ಉಮ್ಮ'ನಿಗೆ ಹಸಿವೆಯೇ ಇರಲಿಲ್ಲ
ನಾವ್ಯಾರೂ ಹಸಿದು ಮಲಗಿದ್ದೂ ಇಲ್ಲ
ನನಗೂ ಆಶ್ಚರ್ಯ ,ಸಾಲಗಾರರೂ ಅಂಗಳಕ್ಕೆ ಬಂದಿದ್ದಿಲ್ಲ .!!
ಮುಗಿದಿಲ್ಲ ,ಕಥೆಯಿನ್ನೂ ಇದೆ...

ಅಂದು ಬೆಳಗ್ಗೆ 'ಶಿವಪ್ಪಜ್ಜ ಅಡುಗೆ ಕೋಣೆಗೂ ಬಂದು
ಪಾತ್ರೆ ಪಗಡೆಗಳನ್ನೆಲ್ಲಾ ತಡಕಾಡಿದ್ದ
ಮತ್ತೆ ,
ಮಧ್ಯಾಹ್ನ ಬ್ರಹ್ಮಾಂಡ ಸುಳ್ಳು ಹೇಳಿಯೇ ಬಿಟ್ಟ
'ನಿಮ್ಮ ಬಾಳೇ ಗಿಡದಲ್ಲಿ ಅಕ್ಕಿ ಆಗಿದೆ ನೋಡು'
ಬಾಳೆ ಬುಡದಲಿ ದೊಡ್ಡದೊಂದು ಕಟ್ಟೇನೋ ಬಿದ್ದಿತ್ತು ,
ಆದರೆ ;
ಶಿವಪ್ಪಜ್ಜ ಹಸಿಹಸಿ ಸುಳ್ಳು ಹೇಳಿದ್ದ ,
ಬಾಳೆಗಿಡದಲ್ಲಿ ಅಕ್ಕಿಯಂತೆ !!
ನನಗಿವತ್ತೂ ಕೋಪ ಶಿವಪ್ಪಜ್ಜನೊಂದಿಗೆ .!!

ನಾನು ಶಿವಪ್ಪಜ್ಜನನ್ನು ದ್ವೇಷಿಸುತ್ತೇನೆ ,
ಯಾಕೆಂದರೆ
ಆ ದಿನಊರಿಗೆಲ್ಲಾ ಈದ್ ಸಂಭ್ರಮ ,
ಆಟದ ಗದ್ದೆಗಳಲ್ಲಿ ಬಣ್ಣ ಬಣ್ಣದ ಬಟ್ಟೆಗಳದ್ದೇ ಸುದ್ದಿ,
ಅಬ್ಬ ನಮ್ಮನ್ನು ಆಟಕ್ಕೆ ಬಿಡುತ್ತಿರಲ್ಲ .

ಕಥೆಯಿನ್ನೂ ಇದೆ ಕೇಳಿ ,
ಗಟ್ಟಿ ಸ್ವಭಾವದ ಅಬ್ಬನನ್ನು
ಈದ್ ಮುನ್ನಾ ದಿನ ಶಿವಪ್ಪಜ್ಜ ಕಣ್ಣೀರಾಗಿಸಿದ್ದ ,
ಆ ದಿನ ಸಂಜೆ ಪಂಚೆಯ ತುದಿಯಲ್ಲಿ
ದೊಡ್ಡ ಚಿಲ್ಲರೆ ಕಟ್ಟನ್ನು ಸೀಟೌಟಿನಲ್ಲಿ ಸುರಿದು
'ಪೋ ಮಾಸ ದೆತ್ತೊಂದು ಬಲ'
ಎಂದಿದ್ದ,
ಅಬ್ಬನನ್ನು ಕಣ್ಣೀರಾಗಿಸಿದ್ದಕ್ಕಾಗಿ ಶಿವಪ್ಪಜ್ಜನನ್ನು ನಾ ಇವತ್ತಿಗೂ ದ್ವೇಷಿಸುತ್ತೇನೆ ,
ಅಂದು ನಮ್ಮ ಮನೆಯಲ್ಲಿ ಮಾಂಸದೂಟ
ಶಿವಪ್ಪಜನ ಮನೆಯಲಿ 'ಪದ್ಪೆ' ಪದಾರ್ಥ ..!!!

ಕೊನೆಗೊಂದು ದಿನ ಶಿವಪ್ಪಜ್ಜ
ನಾನಿಲ್ಲದ ದಿವಸವೇ ,
ಬಾರದ ಲೋಕಕ್ಕೆ ಹೊರಟು ನಿಂತ ,
ನಾನಿವತ್ತಿಗೂ ಶಿವಪ್ಪಜ್ಜನನ್ನು ದ್ವೇಷಿಸುತ್ತೇನೆ ,
ಯಾಕೆಂದರೆ,
ಕೊನೆಯ ಬಾರಿ ನೋಡಲಾಗದಂತೆ ಹೊರಟಿದ್ದಕ್ಕೆ ,
ನಮ್ಮೆದೆಯೊಳಗೆ ಸ್ಥಾನ ಪಡೆದಿದ್ದಕ್ಕೆ .

ಶಬ್ದಾರ್ಥ ,
ಅಬ್ಬ = ಅಪ್ಪ
ಉಮ್ಮ = ಅಮ್ಮ
ಪೋ ಮಾಸ ದೆತೊಂದು ಬಲ = ಹೋಗು ಮಾಂಸ ತೆಗೆದುಕೊಂಡು ಬಾ
ಪದ್ಪೆ ಪದಾರ್ಥ= ಅರಿವೆ ಪದಾರ್ಥ

Comments