-ಬಾಪು ಅಮ್ಮೆಂಬಳ
ಓ ಹೌದಾ , ಚಂದದ 'ಫ್ಯಾಮಿಲಿ' ನಿಮ್ಮದು ,
ಭಾರೀ ಚಂದ ಬಂದಿದೆ ಪಟ ,
ನೀವು ನಿಮ್ಹೆಂಡ್ತಿ ಮಗು ,
ಇರಲಿ ಸಂತೋಷ ನೂರ್ಕಾಲ ಬಾಳಿ .
'ಫ್ಯಾಮಿಲಿ'ಯೊಂದಿಗೆ ಖುಷಿ ಖುಷಿಯಾಗಿರಿ .
ಏನಂದಿರಿ , ನನ್ನ 'ಫ್ಯಾಮಿಲಿ' ಪಟವೇ ?
ಕ್ಷಮಿಸಿ , ನನ್ನೊಂದಿಗೆ ನನ್ನ ಕುಟುಂಬದ ಪಟವಿದೆ !!
ಏನಂದಿರಿ , ಹಾಗಂದ್ರೆ ಒಂದೇ ಅರ್ಥವೆಂದೇ !? ಕ್ಷಮಿಸಿ ,
ಒಂದ್ನಿಮಿಷ ತಡೀರಿ ತೋರಿಸುವೆ .
ನೋಡಿ ಇದು ನಮ್ಮ ಕುಟುಂಬದ ಪಟ
ಇದು ನನ್ನ ತಂದೆ-ತಾಯಿ ಅಜ್ಜ-ಅಜ್ಜಿ ,
ಏನಂದಿರಿ ? ಹಾ ಹೌದು ಹಿರಿಯರಿದ್ರೆ ಪುಸ್ತಕ ಭಂಡಾರವಿದ್ದಂತೆ
ದಾರಿ ತಪ್ಪಲು ಬಿಡೋದೇ ಇಲ್ಲ !!
ಇದು ನಾನು, ನನ್ಹೆಂಡ್ತಿ ,ನಮ್ಮಕ್ಳು ,
ಹಾ ಹೌದು ಇದು ತಮ್ಮ ,ಅವನ್ಹೆಂಡ್ತಿ ಅವನ ಮಕ್ಳು ,
ಪಕ್ಕದಲ್ಲಿರೋದು ತಂಗಿ ಬಾವ
ಹೂಂ ಹೌದು ಮದ್ವೇ ಆಗಿದೆ !!
ಆದ್ರೂ ಏನಂತೆ ,ನಾವೇನು ಅವ್ರಿಗೆ ಮಾರಿದ್ದಲ್ಲ ಅಲ್ವ ?ಹ್ಹ ಹ್ಹ ಹ್ಹ
ತಂಗಿ ಮನೇಲಿದ್ರೆ ದಿನವೂ ಹಬ್ಬ .
ಹೋ ಇದುವಾ ,ಅದೆಲ್ಲ ಕುಟುಂಬದ ಮಕ್ಕಳೇ ,
ಇದು ದೊಡ್ಡಪ್ಪನ ಮಕ್ಕಳು ,
ಇದು ಚಿಕ್ಕಪ್ಪನದ್ದು ,ಇದು ಅತ್ತೆಯ ಮಕ್ಕಳು
ಹೂಂ ನಮ್ಮ ಹತ್ತಿರದಲ್ಲೇ ಇರೋದು
ಮನೆಗಳು , ಮನಸ್ಸುಗಳು.
ಹಾ ಹಣೆಗೆ ಬೊಟ್ಟು ಇಟ್ಟ ಮಕ್ಕಳಾ ?
ಹೂಂ ಇವರೂ ಕುಟುಂಬಿಕರೇ
ಶಿವಪ್ಪಜ್ಜನ ಮೊಮ್ಮಕ್ಕಳು .
ಇದು ನೋಡಿ ನಮ್ಮ ಟಿಂಟು ನಾಯಿ ,
ಮೊನ್ನೆ ಇದರ ತಾಯಿ ತೀರಿ ಹೋಯಿತು ,
ಅವತ್ತೆಲ್ಲ ಯಾರಿಗೂ ಊಟ ಸೇರಿಲ್ಲ.
ಇವೆರೆಡು ಬೆಕ್ಕು ಮನೆತುಂಬಾ ಓಡಾಡಿಕೊಂಡೇ ಇರುತ್ತೆ ಹ್ಹ ಹ್ಹ ,
ಈ ಬದಿಯಲ್ಲೊಂದು ಬಾಲ ಕಾಣಿಸ್ತಿದಿಯಲ್ಲ
ಮೊನ್ನೆ ಹುಟ್ಟಿದ ಆಡಿನ ಮರಿಯದ್ದು ,
ಪಟ ಕ್ಲಿಕ್ಕಿಸುವಾಗ ಓಡಿಹೋಯಿತು .
ಹೋ ಕ್ಷಮಿಸಿ ಸುಸ್ತಾಯಿತಾ ?
ನಮ್ಮ ಕುಟುಂಬ ಸ್ವಲೂಪ ದೊಡ್ಡದು ,
ಸರಿ ಇನ್ನೊಮ್ಮೆ ಸಿಗುವೆ
ಮನೆಗೆ ನೆಂಟರು ಬಂದಿದ್ದಾರಂತೆ
ಹೋಗಿಲ್ಲಾಂದ್ರೆ ಅಜ್ಜ ಬೊಬ್ಬೆ ಹೊಡಿತಾರೆ ಹ್ಹ ಹ್ಹ
ಬರ್ತೀನಿ .
Comments
Post a Comment