-ಬಾಪು ಅಮ್ಮೆಂಬಳ
ಶ್ ಶ್ ಯಾರೂ ಮಾತಾಡಬೇಡಿ ಕೇಳಿಲ್ಲಿ ,
ಇವತ್ತು ನಾ ಎಲ್ಲಿಗೆ ಹೋಗಿದ್ದೆ ಗೊತ್ತಾ ?
ರೈಲಿನ ಇಡೀ ಬೋಗಿಯಲ್ಲಿ ನಾನೊಬ್ಬನೇ ಇದ್ದೆ ,
ಜನರೆಲ್ಲಾ ಇದ್ದರೆ ಕಿರಿಕಿಯಾಗುತ್ತದೆ ನನಗೆ
ಅದಕ್ಕೆ ಒಬ್ಬನೇ ಹೋಗಿದ್ದೆ !
ನೀಲೇಶ್ವರದಲ್ಲಿ ಇಳಿದೆ
ಅಲ್ಲೆಲ್ಲ ಎಂಥಾ ಬೆಳಕು ,
ಅಗ್ನಿಶಿಲೆಯ ಹಾಗೆ ಊರಿಡೀ ಕೆಂಪಾಗಿ ಹೊಳೆಯುತ್ತಿತ್ತು .!
ಅದೋ ಅಲ್ಲಿ ತೇಜಸ್ವಿನಿಯಲ್ಲಿ
ಕ್ರಾಂತಿಗೀತೆ ಕೇಳಿತು
ಕಯ್ಯೂರಿನಿಂದಲೇ ಕೇಳಿದ್ದಿರಬೇಕು .!!
ಕಯ್ಯೂರಲ್ಲಿ ಕುಟ್ಟಿಕೃಷ್ಣನೊಬ್ಬನೇ ಕಾಯುತ್ತಿದ್ದ
ಸರಿ
ಮುಂದೆ ಅಪ್ಪುವಿನ ಮನೆ ,
ಅಪ್ಪು ಅಲ್ಲಿರಲಿಲ್ಲ ಸಂಘದ ಆಫೀಸಲ್ಲಿ ನಾಲ್ವರೂ ಕಾಯುತ್ತಿದ್ದಾರೆಂದ ಕುಟ್ಟಿಕೃಷ್ಣ,
ಅಲ್ಲಿ ಎಲ್ಲರೂ 'ದೇಶಾಭಿಮಾನಿ' ಓದುತ್ತಿದ್ದರು ,
ಅರೆ ಮಾಸ್ಟರ್ ,ಕಣ್ಣನ್,ನಾಯರ್ ಎಲ್ಲರೂ ಇದ್ದಾರೆ !!
ಪಂಡಿತರನ್ನೂ ಕಂಡಹಾಗೇ ಆಯಿತು
ಪರಿಚಯ ,ಚರ್ಚೆ ,ಕ್ರಾಂತಿಗೀತೆ ,ಒಂದಿಷ್ಟು ನಗು .
ಶ್ ಶ್ ಕೇಳಿಲ್ಲಿ ,
ಒಂದಿಷ್ಟು ತಿಂದು
ಕೆಳಗೆ ತೇಜಸ್ವನಿಯ ಬದಿಯಲ್ಲಿ
ಗಂಭೀರ ಚರ್ಚೆ ಅಪ್ಪು, ಚಿರಕುಂಡ ಮತ್ತು ನಾನು ,
ಹಳೇಯದೊಂದು ದೋಣಿಯಲಿ
ಚೆರ್ವತ್ತೂರಿಗೂ ದಾಟಿ ಬಂದೆವು .
ಎಲ್ಲರ ಮನೆಗೊಮ್ಮೆ ಹೊಕ್ಕು
ತಂ(ಕೆಂ)ಪಾದ ಇಡೀ ಕಯ್ಯೂರ ಸುತ್ತಾಡಿದೆ ನಾನೊಬ್ಬನೆ !
ಸಂಜೆ ಹೊರಟಾಗಲೂ ನಾನೊಬ್ಬನೇ ಇಡೀ ಬೋಗಿಯಲ್ಲಿ ,
ಎದೆಯೊಳಗವರೆಲ್ಲರೂ
ಒಂಟಿಯಲ್ಲ ನಾನು .!
ಬಾನಿಡಿ ಕೆಂಪಾಗಿಸಿ ರವಿ ಮುಳುಗುತ್ತಿದ್ದ
ನಾಳೆ ಉದಿಸಿಯೇ ತೀರುತ್ತೇನೆಂಬ ದೃಡಸಂಕಲ್ಪದಲಿ
ಕಯ್ಯೂರಲ್ಲಿಯೂ ಉದಿಸಿಯಾಗಿತ್ತು ಅದೇ ವಿಶ್ವಾಸ ರವಿಗೂ .
ಕಿಟಕಿಯಾಚೆಯಿಂದ ನೋಡಿದೆ
ಕಯ್ಯೂರಿನ ವೀರಗಂಬದಲ್ಲೊಂದು ಕೆಂಬೆಳಕು
ಅದರಡಿಯಲಿ ನಾಲ್ವರೂ ನಗುತ್ತಿದ್ದರು ,
ಅದಕ್ಕೂ ಕಾರಣವಿತ್ತು
'ದಲಿತಕೋಟಿಯ ಎದೆಗೂಡಲ್ಲಿ ಕಟ್ಟಿದ
ಸಾಮ್ರಾಜ್ಯ ಪುಡಿಪುಡಿಯಾಗಿತ್ತು'
'ದುಡಿವ ಜನರ ಕೈಯ್ಯಲ್ಲಿ ವಿಜಯಪತಾಕೆಯಿತ್ತು'
ನಾನೊಬ್ಬನೇ ಬೋಗಿಯಲ್ಲಿದ್ದೆ
'ಇಂಕ್ವಿಲಾಬ್ ಸ್ಪಷ್ಟವಾಗಿ ಕೇಳುತ್ತಿತ್ತು'
Comments
Post a Comment