ಶತ್ರು ಸಂಹಾರ (ಕಥಾ ಅಂಗಳ)

-ಬಾಪು ಅಮ್ಮೆಂಬಳ
ರಾತ್ರಿಯ ನಿರ್ಜನ ಪ್ರದೇಶದ ರಸ್ತೆ. ಐದು ಜನ ದಾಂಡಿಗರು 3 ಅಡಿ ಉದ್ದದ ಮಚ್ಚು ಹಿಡಿದು ಬಲಿಗಾಗಿ ಕಾಯುತ್ತಿದ್ದಾರೆ......ಗಾಂಜಾ, ಮದ್ಯದ ವಾಸನೆ ಎಲ್ಲರ ಉಸಿರಿನಲ್ಲೂ ಬರುತ್ತಿದೆ. ದಾಂಡಿಗರ ನಾಯಕ ಹಲ್ಲುಕಡಿಯುತ್ತಿದ್ದಾನೆ 'ಅವರಿಂದಾಗಿ ನಮಗೆ ರಕ್ಷಣೆಯಿಲ್ಲದಾಗಿದೆ,ಇವತ್ತು ಬಿಡಲೇಬಾರದು' ಉಳಿದವರೂ ಇವನ ಮಾತಿಗೆ ತಲೆದೂಗುತ್ತಿದ್ದಾರೆ ಮಚ್ಚನ್ನೊಮ್ಮೆ ಎತ್ತಿ ತಿರುಗಿಸುತ್ತಿದ್ದಾರೆ. ಶತ್ರುಧರ್ಮದವನಿಗಾಗಿ(?) ಕಾಯುತ್ತಿದ್ದಾರೆ, ಜೀವ ತೆಗೆಯಲು...
        ಅದೇ ರಸ್ತೆಯ ದೂರದಲ್ಲಿ ವಾಹನದ ಬೆಳಕು ಇವರ ಹತ್ತಿರ ಚಲಿಸುತ್ತಾ ಬರುತ್ತಿದೆ.ದಾಂಡಿಗರ ನಾಯಕ ತನ್ನ ಚೇಳಾಗಳಿಗೆ ರೆಡಿಯಾಗಳು ಸೂಚಿಸಿದ. ವಾಹನ ಹತ್ತಿರ ಬರುತ್ತಿದ್ದಂತೆ ಒಬ್ಬ ದಾಂಡಿಗ ರಸ್ತೆಗೆ ಅಡ್ಡವಾಗಿ ನಿಂತು ವಾಹನವನ್ನು ನಿಲ್ಲಿಸಿದ... ವಾಹನವನ್ನೊಮ್ಮೆ ಸೂಕ್ಷಮವಾಗಿ ಗಮನಿಸಿ ವಾಹನ ಮತ್ತು ವಾಹನದಲ್ಲಿರುವವನು ಶತ್ರುಧರ್ಮದವನೆಂದು ಖಚಿತ ಪಡಿಸಿದವನೇ  ತನ್ನ ಸಹಚರರಿಗೆ ಸಿಗ್ನಲ್ ಕೊಟ್ಟ. ಕ್ಷಣದಲ್ಲೇ ಎಲ್ಲರೂ ವಾಹನವನ್ನು ಸುತ್ತುವರೆದು ವಾಹನದಲ್ಲಿರುವನನ್ನು ಹೊರಗೆಳೆದು ಮನಸೋ ಇಚ್ಛೆ ಕೊಚ್ಚಲು ಶುರುಮಾಡಿದರು. ವಾಹನದವ ಬೊಬ್ಬೆ ಹೊಡೆಯುತ್ತಿದ್ದಾನೆ 'ಯಾರು ನೀವೆಲ್ಲ...?? ನನ್ನ್ಯಾಕೆ ಕೊಲ್ಲುತ್ತಿದ್ದೀರಿ...?? ,ದಯಮಾಡಿ ಬಿಟ್ಟುಬಿಡಿ' ಎಂದು ದಯನೀಯವಾಗಿ ಕೇಳುತ್ತಿದ್ದಾನೆ ಆದರೆ ದಾಂಡಿಗರ ನಾಯಕ 'ನಿಮ್ಮಿಂದಾಗಿ ನಮಗೆ ರಕ್ಷಣೆ ಇಲ್ಲದಾಗಿದೆ ,ನಿಮ್ಮವರಿಗೆಲ್ಲಾ ಇನ್ನು ಮುಂದೆ ಇದೇ ಗತಿ' ಎಂದು ಒಂದೇ ಏಟಿಗೆ ರುಂಡವನ್ನು ಆತನ ಮುಂಡದಿಂದ ಬೇರ್ಪಡಿಸಿದ ,ಗಹಗಹಿಸಿದ 'ಶತ್ರುಧರ್ಮದ ಒಬ್ಬ ಫಿನಿಶ್' ಯಾವ ಕುರುಹುಗಳನ್ನೂ ಬಿಡದಿರಿ' ಎಂದು ಸಂಗಡಿಗರಿಗೆ ಆದೇಶಿಸಿದ.
                ನಂತರ ಎಲ್ಲರೂ ವಾಹನವೇರಿ ಅವರ ಅಡ್ಡಾಕ್ಕೆ ಹೊರಟರು. ರಹಸ್ಯ ಅಡ್ಡಾದಲ್ಲಿ ವಿಜಯೋತ್ಸವ....!! ಮತ್ತಷ್ಟು ಮದ್ಯ ಮತ್ತು ಗಾಂಜಾ......!!ಅಷ್ಟರಲ್ಲಿ ದಾಂಡಿಗರ ನಾಯಕನ ಮೊಬೈಲು ರಿಂಗೆಣಿಸುತ್ತದೆ. ಮೊಬೈಲಿನಲ್ಲಿ ತನ್ನ ತಂಗಿಯ ಕರೆ. ಅತ್ತ ಕಡೆಯಿಂದ 'ತಂದೆಗೆ ಅಫಘಾತವಾಗಿದೆ,ನಾನು ಮತ್ತು ಅಮ್ಮ ಆಸ್ಪತ್ರೆಯಲ್ಲಿದ್ದೇನೆ ,ನೀನು ಬೇಗನೇ ಬಂದು ಬಿಡು' .ಇವನಿಗೆ ಮದ್ಯದ ಅಮಲು ಜಾಸ್ತಿಯಾದ್ದರಿಂದ 'ನಾನು ತುಂಬಾ ದೂರವಿದ್ದೇನೆ ಬೆಳಿಗ್ಗೆ ಬಂದು ಬಿಡುತ್ತೇನೇ' ಎಂದು ಕರೆ ಕಟ್ ಮಾಡಿದ.
                 ಬೆಳಿಗ್ಗೆ ,ಯಾವ ದೇವರನ್ನೂ ನೆನೆಯದೇ ,ಕೈಮುಗಿಯದೇ ,ಸಾಷ್ಟಾಂಗವೆರಗದೇ 'ಧರ್ಮರಕ್ಷಕ' ದಾಂಡಿಗರ ನಾಯಕ ತಂದೆಯ ನೋಡಲು ಆಸ್ಪತ್ರೆಗೆ ಹೊರಟ.  ದಾರಿಯಲ್ಲಿ ಗುಂಪು ಗುಂಪಾಗಿ ಮಾತಾಡುತ್ತಿದ್ದಾರೆ ,'ರಾತ್ರಿ ಮರ್ಡರ್ ಆಗಿದೆ,ಮಾನವೀಯತೆ ಇಲ್ಲದವರು ಶರೀರದ ಇಂಚಿಂಚೂ ದಾಳಿ ಮಾಡಿದ್ದಾರೆ ' ಎಲ್ಲರೂ ಮರುಗುತ್ತಿದ್ದಾರೆ ಆದರೆ ದಾಂಡಿಗ ಎದೆಯುಬ್ಬಿಸಿ ನಡೆಯುತ್ತಿದ್ದಾನೆ 'ಧರ್ಮದ' ರಕ್ಷಣೆ ಮಾಡಿದ್ದಾಗಿ ಮನಸಲ್ಲೇ  ಖುಷಿಪಡುತ್ತಾ ಮೀಸೆ ತಿರುವಿಕೊಳ್ಳುತ್ತಾನೆ.
              ದಾಂಡಿಗ ಆಸ್ಪತ್ರೆ ಮುಟ್ಟಿದೊಡನೇ, ತಂದೆ ಚಿಕಿತ್ಸೆಪಡೆಯುತ್ತಿರುವ ಕೋಣೆಗೆ ಪ್ರವೇಶಿಸಿ, ತಾಯಿಯೊಂದಿಗೆ ನಗುತ್ತಾ ಮಾತಾಡುತ್ತಿರುವ ತಂದೆಯ ಕಂಡು ಸಮಾಧಾನದಿಂದ ನಿಟ್ಟುಸಿರು ಬಿಟ್ಟ. ನಂತರ ತಂಗಿಯಲ್ಲಿ ಏನಾಗಿದೆ ಎಂದು ವಿಚಾರಿಸಿದಾಗ 'ಅಪ್ಪ ರಾತ್ರಿ ಮನೆಗೆ ಬರುತ್ತಿರುವಾಗ ಯಾವುದೋ ಕಾರಿನವ ಡಿಕ್ಕಿ ಹೊಡೆದು ರಸ್ತೆಯಲ್ಲಿ ಬಿದ್ದಿದ್ದರಂತೆ' ತಂಗಿ ಹೇಳುತ್ತಿದ್ದಳು, ದಾಂಡಿಗನಿಗೆ ಅಘಾತವಾಯಿತು..!!. ರಾತ್ರಿ ಶತ್ರುಧರ್ಮದವನನ್ನು ಕೊಲ್ಲಲು ಹೋಗುತ್ತಿರುವಾಗ 'ಯಾರೋ ವೃದ್ಧ ಅಡಿಗೆ ಬಿದ್ದ'  ಎಂದು ಚಾಲಕನಾದ ತನ್ನ ಚೇಳಾ ಹೇಳಿದಾಗ 'ಮುದುಕನಲ್ವ ಬಿಡು' ಎಂದು ಮದ್ಯದ ಅಮಲಿನಲ್ಲಿ ಅದನ್ನು ಗಮನಿಸದೇ ಸೀದಾ ಹೋಗಿದ್ದು ನೆನಪಾಗಿ ಅವುಡುಗಚ್ಚಿದ.ತಂಗಿ ಮಾತು ಮುಂದುವರೆಸಿದ್ದಳು..... 'ರಸ್ತೆಯಲ್ಲಿ ಬಿದ್ದು ನರಳುತ್ತಿದ್ದ ಅಪ್ಪನನ್ನು ಯಾರೋ.........'; ಅಷ್ಟರಲ್ಲಿ ಡಾಕ್ಟರ್ ಎದುರುಸಿರು ಬಿಡುತ್ತಾ ಓಡಿಬಂದು ,ಕೈಯ್ಯಲ್ಲಿ ಅಂದಿನ ದಿನಪತ್ರಿಕೆ ಹಿಡಿದು ದಾಂಡಿಗನ ತಂಗಿಗೆ ತೋರಿಸುತ್ತಾ 'ನೋಡಿ ಮೇಡಂ ಅನ್ಯಾಯ ,ನಿನ್ನೆ ರಾತ್ರಿ ನಿಮ್ಮ ತಂದೆಯನ್ನು ಆಸ್ಪತ್ರೆಗೆ ತಂದು ,ಜೀವ ಉಳಿಸಿದ ಯುವಕನನ್ನು ,ದಾರಿಯಲ್ಲಿ ಬರ್ಬರವಾಗಿ ಕೊಂದಿದ್ದಾರೆ...!! ಅವರು ನಿನ್ನೆ ನಿಮ್ಮ ತಂದೆಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆತರದಿದ್ದರೆ ಬದುಕುಳಿಯುದೇ ಕಷ್ಟವಾಗುತ್ತಿತ್ತು...!!ಡಾಕ್ಟರ್ ಹೇಳುತ್ತಿದ್ದಾರೆ.... ದಾಂಡಿಗ 'ಶತ್ರು ಧರ್ಮ' ಅಂದರೇನು ತನ್ನಲ್ಲೇ ಪ್ರಶ್ನಿಸುತ್ತಿದ್ದ... ಮಾನಸಿಕವಾಗಿ ಸತ್ತೇ ಹೋಗಿದ್ದ.

Comments