-ಬಾಪು ಅಮ್ಮೆಂಬಳ
1
ನೂರು ಮಂದಿ ಸತ್ತರೆಂದು
ಮರುಗಿದಂತೆ ನಟಿಸಿ, ವಿಕೃತ ನಗೆ ಚೆಲ್ಲುತ್ತಾರೆ .
ಮನುಷ್ಯರ ಹಸಿಹಸಿ ಜೀವವನ್ನು
ವಿರೋದಿಗೆ ಆಯುಧವಾಗಿಸಿ ಝಳಪಿಸುತ್ತಾರೆ .
________
2
ಇಲ್ಲಿ ವಂಚನೆಯರಿಯದ ಮಕ್ಕಳಲ್ಲೂ
ಸಿದ್ಧಾಂತ ಗುರುತಿಸುತ್ತಾ ರಾಕ್ಷಸರಾಗುತ್ತಾರೆ .
ಅಲ್ಲೆಲ್ಲೋ ದೇಹದ ಕಿಡ್ನಿಯನ್ನೂ
ಮನಸಾರೆ ಹಂಚಿ ಮಾನವತೆಯ ಉತ್ತುಂಗತೆಗೇರುತ್ತಿದ್ದಾರೆ .
________
3
ದಯಮಾಡಿ ಯಾರೂ ನನ್ನೊಂದಿಗೆ ,
ಪ್ರೀತಿ ತೋರಿಸ ಬೇಡಿರಿ !!
ನನ್ನೊಳಗೂ ಪ್ರೀತಿಯ ಬಿತ್ತಿ ,
ಮಾನವನಾಗುವಂತೆ ಮಾಡಿ ,
ನನ್ನನ್ನೂ , ನನ್ನವರ ಗುಂಪಿನಿಂದ ;
ಹೊರ ಹೋಗುವಂತೆ ಮಾಡದಿರಿ.
________
4
ಹೇ ದೇವಾ ,
'ಕೊಚ್ಚಿ ಕೊಂದರು' ಎಂಬ ಸುದ್ದಿಗೆ ,
ಮರುಗುವ ಮನಸ್ಸನ್ನಷ್ಟೇ ನೀಡು .
'ಮುಸಲ್ಮಾನನನ್ನೇ ?' ಎಂದು ಕೇಳುವಂತಾಗಿಸಿ
ನೀಚ ರಾಕ್ಷಸನನ್ನಾಗಿಸದಿರು .
________
5
'ಜೀವ ಅಮೂಲ್ಯ' ಎಂದು ,
ಯಾರೋ ಬರೆದಿಟ್ಟ ಉಕ್ತಿ
ಎಂದೋ ಅಳಿದು ಹೋಗಿದೆ .
ಇಂದೋ ನಾಳೆಯೋ ನಿಷೇದವಾಗುವ
ಹಣವೆಂಬ ಕಾಗದ ತುಂಡಿಗೆ
ಮೌಲ್ಯ ಹೆಚ್ಚಾಗಿದೆ .
________
6
ದೇವಾ ,
ಒಳಗಿನ ಮಾನವ ಸತ್ತ ದಿನ ,
ಯಾರನ್ನೂ ಒಂದು ಕ್ಷಣವೂ ಉಳಿಸದಿರು ;
ನಿನ್ನ ಬಳಿ ಕರೆಸಿಬಿಡು .
-ರಾಕ್ಷಸನ ಇತರ ಸಾಲುಗಳು-
1
ಅಂಬರದ ಚುಕ್ಕಿಗಳ ಹೊಳಪು ಕೂಡಾ ,
ಕ್ರೌರ್ಯದ ಕಣ್ಣಿನಂತಿದೆಯೆಂದು
ಚಂದಿರ ನಲುಗಿದ್ದಾನೆ .
________
2
ಸಮಯಕ್ಕೆ ಸರಿಯಾಗಿ ಅಂಬರದಂಗಳಕ್ಕೆ
ಆಡಲು ಬರುತ್ತಿಲ್ಲ
ಕೋಮು ದಳ್ಳುರಿಯ ಭಯವಿದೆಯಂತೆ.
________
3
ನಿದ್ದೆ ಕಣ್ಣಲ್ಲೂ ಚಂದಿರ
ಬೆಚ್ಚಿ ಬೀಳುತ್ತಿದ್ದಾನೆ ,
ಎಲ್ಲೋ ಚುಕ್ಕಿ ಉದುರಿ ಬಿತ್ತಂತೆ !!
ಶತ್ರುಗಳನ್ನೂ ಆತ ಪ್ರೀತಿಸುತ್ತಾನೆ .
________
4
ಮೋಡಗಳೆಡೆಯಲ್ಲಿ ನಡೆಯುವ ಪಿತೂರಿ
ಚಂದಿರನಿಗೆ ತಿಳಿದಿಲ್ಲ ,
ನಾಳೆ ಸರಿ ಹೋಗಬಹುದೆಂದು
ಇಂದು ಯಾರ ಕಣ್ಣಿಗೂ ಬೀಳುತ್ತಿಲ್ಲ .
_______
5
ಮಚ್ಚು ಮಸೆದು ತಯಾರಾಗಿದೆ
ನಾಳೆ ರಾತ್ರಿಯೇ ನೀವೆಲ್ಲರೂ ನೋಡಿ ಬಿಡಿ
ಯಾವುದಾದರು ಕೆರೆಯೋ ,ಹೊಳೆಯಲ್ಲೋ
ಚಂದಿರ ಸತ್ತು ತೇಲುತ್ತಿರುತ್ತಾನೆ ,
ಆದರೂ ಹೊಳೆಯುತ್ತಿರುತ್ತಾನೆ !!
Comments
Post a Comment