-ಬಾಪು ಅಮ್ಮೆಂಬಳ
"ನಜ್ಜಿ,ಅವನಿಗೆ 'ನೋಂಬು' ಇಲ್ವಂತೆ" ,ರಂಝಾನಿನ ಒಂದು ಮಂಗಳವಾರದ ದಿನ. "ವಿಟ್ಲ"ದ ವಾರದ ಸಂತೆಯಲ್ಲಿ ರಿಯಾಝ್ ನನ್ನ ಹತ್ತಿರ ಹೇಳುವಾಗ,ನಾನು ಒಣ ಮೆಣಸು ಸುರಿಯುತ್ತಾ ಇದ್ದೆ. ನನಗಂತೂ ಎಲ್ಲಿಲ್ಲದ ಸಂತೋಷ,ಯಾಕೆಂದರೆ ಪತ್ತೇದಾರಿಕೆ ಮಾಡಲು...!! .
ಇವತ್ತು "ಅವನ"ನ್ನು ರೆಡ್ ಹ್ಯಾಂಡಾಗಿ ಹಿಡಿಯಬೇಕು , ನಾನು ಖುಷಿಯಲ್ಲಿ ರಿಯಾಝ್ ಗೆ ಹೇಳಿದೆ.ಅಂತೂ ಮೆಣಸು ಸುರಿದು ವ್ಯಾಪಾರದ ಐಟಂ ಎಲ್ಲಾ ಜೋಡಿಸಿ ನಿಲ್ಲುವಾಗ,"ಅವನು" ಕೆಳಗಡೆ ಹೋಗುತ್ತಾ ಇರುವುದನ್ನು ನೋಡಿದ ನಾನು,"ಅವನು" ಹೋಗುತ್ತಾ ಇದ್ದಾನೆ ಎಂದು ರಿಯಾಝ್ ನನ್ನು ಎಚ್ಚರಿಸಿದೆ.
"ಅವನು" ಆಚೆ-ಈಚೆ ನೋಡಿಕೊಂಡು ಹೆಜ್ಜೆ ಹಾಕುತ್ತಿದ್ದ.ನಾನು ಮತ್ತು ರಿಯಾ "ಅವನಿಗೆ" ತಿಳಿಯದ ಹಾಗೆ ಅವನನ್ನು ಹಿಂಬಾಲಿಸಿದೆವು. "ಅವನು" ನಡೆಯುತ್ತಾ ನಡೆಯುತ್ತಾ ಜಾಗರೂಕತೆಯಿಂದ 'ಹೋಟೆಲ್ ಭಗವತಿಗೆ' ಪ್ರವೇಶಿಸಿದ,ನಾವು "ಅವನ"ನ್ನು ಹಿಂಬಾಲಿಸಿ ಒಳಗೆ ಹೋಗುವಷ್ಟರಲ್ಲಿ,"ಅವನು" ತಿಂಡಿ ತಿನ್ನುತ್ತಿದ್ದ. ನಾನಂತೂ ಖುಷಿಯಿಂದ ನನ್ನ ಮೊಬೈಲ್ ತೆಗೆದು "ಅವನ" ಫೋಟೊ ಕ್ಲಿಕ್ಕಿಸಿದೆ.ಅಷ್ಟರಲ್ಲಿ "ಅವನು" ನಮ್ಮನ್ನು ನೋಡಿದ...ಆದರೂ ಅವನಿಗೆ ನಮ್ಮನ್ನು ಎದುರಿಸುವ ಧೈರ್ಯ ಇಲ್ಲದೆ ತಲೆ ತಗ್ಗಿಸಿ ತಿಂಡಿ ತಿನ್ನತೊಡಗಿದ. ನಾನು ಗತ್ತಿನಲ್ಲೇ ''ನಿನ್ನ ಮರ್ಯಾದೆ ಎಲ್ಲಾ ತೆಗೆಯುತ್ತೇನೆ'' ಎಂದಾಗಲೂ ಅವನು ಮರುಮಾತಾಡದೇ ತಲೆ ತಗ್ಗಿಸಿ ತಿಂಡಿ ತಿನ್ನುತ್ತಿದ್ದ.
ನಾವಿಬ್ಬರೂ ಹೊರಗಡೆ ಬಂದು ಅಲ್ಲಿಂದ "ವಿಟ್ಲ ಟೌನ್ ಮಸೀದಿ"ಗೆ ಬಂದು ಕೈ-ಕಾಲು ತೊಳೆದು ಸಂತೆಗೆ ಹಿಂತಿರುಗುವಾಗ, ಎಲ್ಲರೂ ನಮ್ಮುನ್ನು ನೋಡಿ ಮುಖ ಮುಖ ನೋಡಿಕೊಳ್ಳುತ್ತಿದ್ದರು. ನಾನು ಇದರ ಗೋಜಿಗೆ ಹೋಗದೇ ವಿಜಯದ ಗುಂಗಿನಲ್ಲೇ ಇದ್ದೆ.ಸಂತೆಗೆ ಅಬಂದವನೇ ಖುಷೀಯಿಂದ ನನ್ನ ಮೊಬೈಲ್ ತೆಗೆದು ನನ್ನ ಸ್ಹೇಹಿತ ರಿಜ್ಜುಗೆ ತೋರಿಸಬೇಕು ಅನ್ನುವಷ್ಟರಲ್ಲಿ... "ಹೋಟೆಲ್ ಭಗವತಿಯ ಫುಡ್ ಒಳ್ಳೆಯದಿತ್ತಾ"...... ಎಂದು ನಮ್ಮ ಹತ್ತಿರ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಅಲಿಕಾಕನ ಮಾತು ನಮ್ಮನ್ನು ಉದ್ದೇಶಿಸಿ...
"ನೋಂಬು ಹಿಡಿಯಲಿಕ್ಕೆ ಆಗದ್ದರೆ ಮನೆಯಲ್ಲಿ ಇರಬೇಕು,ಇಲ್ಲಿಗೆ ಬಂದು ನಮ್ಮ ಮರ್ಯಾದೆ ಯಾಕೆ ತೆಗಿತೀರ" ಬಸೀರಾಕನ ಮೂಲಕ.
"ಈ ವಯಸಲ್ಲೂ ನಾವು ನೊಂಬು ಹಿಡಿಯುತ್ತೇವೆ, ನಿಮಗೇನು ಸನ್ನಿ" ವಹಾಬು ಕಾಕರ ಬೈಗುಳ...ನಾವು ಮರುಮಾತಾಡದೇ ನಾಚಿಕೆಯಿಂದ ತಲೆತಗ್ಗಿಸಿ ನಿಂತುಬಿಟ್ಟೆವು. ಸಂತೆಯಿಡೀ ನಮ್ಮ ಬಗ್ಗೆ ಮಾತಾಡುತ್ತಾ ಇತ್ತು.ನನಗೆ "ಅವನನ್ನು" ಫೊಟೊ ತೆಗೆದಾಗ ಇದ್ದ "ಅವನ" ಮುಖ ಮನಸಲ್ಲಿ ತೇಲಿ ಬಂತು.ನಾವಂತೂ ದೊಡ್ಡ ತಪ್ಪು ಮಾಡುತ್ತಿದ್ದೇವೆ ಅಂತ ಮರೆತ್ತಿದ್ದಕ್ಕೆ ಅಲ್ಲಾಹನೂ ನಮಗೆ ತಕ್ಕ ಶಾಸ್ತಿ ಮಾಡಿದ್ದ.ಇನ್ನೊಬ್ಬನ ಮರ್ಯಾದೆ ಕಳೆಯುವ ಭರದಲ್ಲಿ ನಮ್ಮ ಮರ್ಯಾದೆ ಹೋದದ್ದು ವಿಪರ್ಯಾಸ . ಇಷ್ಟೆಲ್ಲಾ ಆಗುತ್ತಿರುವಾಗ "ಅವನು" ನಮ್ಮ ಎದುರಿನಿಂದಲೇ ತಲೆತಗ್ಗಿಸಿ ಹೋದ,ತನ್ನ ವ್ಯಾಪಾರ ಮಾಡಲು. ನಾನು ನನ್ನ ಕಿಸೆಯಲ್ಲಿದ್ದ ಮೊಬೈಲ್ ತೆಗೆದು ಹೋಟೇಲಲ್ಲಿ ತೆಗೆದ ಫೋಟೋ ಡಿಲಿಟ್ ಮಾಡಿದೆ.
ಆದರೂ ಸಂತೆ ಹೇಳುತ್ತಾ ಇತ್ತು.
"ಅವರಿಬ್ಬರಿಗೂ 'ನೊಂಬು' ಇಲ್ವಂತೆ".
Comments
Post a Comment