ಮೇ 16 ರಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದಲ್ಲಿ ನಮ್ಮ ಸ್ನೇಹಿತರಿಗೆ ಅಮೇರಿಕಾದಿಂದ ವೆಂಟಿಲೇಟರುಗಳನ್ನು ದಾನ ಮಾಡುತ್ತೇವೆ ಎಂದು ತಮ್ಮ ಟ್ವಿಟ್ಟರ್ ಅಕೌಂಟಿನಿಂದ ಸಂದೇಶವನ್ನು ಹಾಕಿದ್ದರು. ಅಷ್ಟಕ್ಕೆ ದೇಶದಲ್ಲಿ ಭಾರಿ ಸುದ್ದಿಯಾಯಿತು.
ವಾಸ್ತವದಲ್ಲಿ ಅಮೆರಿಕಾ ಹೇಳಿದ್ದು ಕೇವಲ 200 ವೆಂಟಿಲೇಟರುಗಳನ್ನು ಕೊಡುವುದಷ್ಟೇ ಆಗಿತ್ತು. 135 ಕೋಟಿಗಿಂತಲೂ ಜಾಸ್ತಿ ಜನಸಂಖ್ಯೆಯಿರುವ, 60,000 ಕ್ಕೂ ಹೆಚ್ಚು ಕೊರೊನಾ ರೋಗಿಗಳಿರುವ ಭಾರತಕ್ಕೆ 200 ವೆಂಟಿಲೇಟರುಗಳು ದೊಡ್ಡ ವಿಷಯವೇನೂ ಅಲ್ಲ, ಆದರೆ ಪ್ರಸ್ತುತ ಬಿಕ್ಕಟ್ಟಿನಲ್ಲಿ ಒಂದು ಹುಲ್ಲು ಕಡ್ಡಿ ಕೂಡಾ ದೊಡ್ಡ ವಿಷಯವೇ ಆಗಿರುತ್ತದೆ ಅಂದುಕೊಳ್ಳೋಣ.
ಆದರೆ ಇಲ್ಲಿ ವೆಂಟಿಲೇಟರ್‌ಗಿಂತ ಹೆಚ್ಚಾಗಿ ಅಮೇರಿಕಾದಂತಹ ದೊಡ್ಡಣ್ಣ ಭಾರತವನ್ನು ’ಫ್ರೆಂಡ್’ ಎಂದು ಕರೆದದ್ದನ್ನು ಮಹಾವಿಷಯವಾಗಿ ನೋಡಲಾಯಿತು, ಅಂದರೆ ಆರೋಗ್ಯಕ್ಕಿಂತ ಹೆಚ್ಚು ಇದನ್ನು ರಾಜಕೀಯವಾಗಿಯೆ ಹೆಚ್ಚು ಪ್ರಚಾರ ಪಡೆಯಲು ಬಳಸಲಾಯಿತು. ನಿಜಕ್ಕೂ ಹೇಳಬೇಕೆದಂರೆ ಅಮೇರಿಕಾದಂತಹ ಬಂಡವಾಳಶಾಹಿ ದೇಶ ಯಾವ ಕೊಡುಗೆಯನ್ನೂ ಕೂಡಾ ಪುಕ್ಕಟೆಯಾಗಿ ನೀಡಲ್ಲ, ಅದರ ಪ್ರತಿಯೊಂದೂ ನಡೆಯಲ್ಲೂ ವ್ಯಾಪಾರ ಹಾಗೂ ಲಾಭದ ಉದ್ದೇಶ ಇದ್ದೇ ಇರುತ್ತದೆ.
ನವೆಂಬರ್‌ನಲ್ಲಿ ಅಮೇರಿಕಾದ ಅಧ್ಯಕ್ಷೀಯ ಚುಣಾವಣೆಯಿದೆ ಹಾಗೂ ಟ್ರಂಪ್ ಭಾರತೀಯ ಮೂಲದ ಮತದಾರರನ್ನು ಸೆಳೆಯಲು ಈ ಹಿಂದಿನಿಂಲೂ ಬಹಳ ಕಸರತ್ತು ನಡೆಸುತ್ತಿರುವುದು ಎಲ್ಲರಿಗೂ ತಿಳಿಯದ್ದೇನಲ್ಲ. ಟ್ರಂಪ್ ಘೋಷಿಸಿದ ಈ ದಾನದಲ್ಲೂ ಏನು ಉದ್ಧೇಶವಿದೆಯೆಂದು ನಾವು ಹುಡುಕಲೇ ಬೇಕಾಗುತ್ತದೆ.
ಕ್ಯೂಬಾ ಕ್ರಾಂತಿಕಾರಿ ಚೆಗುವಾರ ಹೇಳಿದಂತೆ ’ಬಂಡವಾಳ ಶಾಹಿಗಳನ್ನು ಒಂದು ಅಣುವಿನಷ್ಟು ಕೂಡಾ ನಂಬಬಾರದು" ಎಂಬುದನ್ನು ನಾವು ಯಾವತ್ತಿಗೂ ನೆನಪಿಟ್ಟುಕೊಳ್ಳಬೇಕು.
ಟ್ರಂಪ್ ದಾನ ಘೋಷಿಸಿದ ಗಂಟೆಗಳ ಅಂತರದಲ್ಲಿ ನಮ್ಮ ದೇಶದ ಪ್ರಧಾನಿಯೂ ಅವರಿಗೆ ಧನ್ಯವಾದ ಅರ್ಪಿಸಿ ಪುನೀತರಾದರು. ಅಮೇರಿಕಾ ಭಾರತ ಸ್ನೇಹ ಇನ್ನೂ ಗಟ್ಟಿಯಾಗಲಿ ಎಂದು ಹಾರೈಸಿದರು. ಇವೆಲ್ಲವೂ ಒಳ್ಳೆಯದೇ, ಆದರೆ ದೇಶದ ವಲಸಿಗರ ನೋವು, ಪಾದಗಳ ರಕ್ತ, ಕಣ್ಣೀರು, ಹತಾಶೆ ನಮ್ಮ ಪ್ರಧಾನಿಯ ಟ್ವಿಟ್ಟರ್ ಖಾತೆಗೆ, ಅವರ ಕಣ್ಣು-ಕಿವಿಗೆ, ಅವರ ಹೃದಯವನ್ನು ಕಲಕಿಲ್ಲ ಹಾಗೂ ತಲುಪಿಲ್ಲ ಎಂದರೆ... ಏನು ಹೇಳುವುದು?
ಪ್ರಧಾನಿಯಾದಿಯಾಗಿ ಮಾಧ್ಯಮಗಳ ಸಹಿತ ಇಷ್ಟೆಲ್ಲ ಪ್ರಚಾರ ಪಡೆದ ಈ ವೆಂಟಿಲೇಟರ್ ಭಾರತವನ್ನು ಮುಂದಿನವಾರ ತಲುಪಬಹುದು. ಆದರೆ ಅಮೇರಿಕಾ ಘೋಷಿಸಿದ 200 ವೆಂಟಿಲೇಟರುಗಳಲ್ಲಿ ಸದ್ಯಕ್ಕೆ ಭಾರತವನ್ನು ತಲುಪಿರುವುದು ಕೇವಲ 50 ಮಾತ್ರ!. ಬಾಕಿ ವೆಂಟಿಲೇಟರುಗಳು ಯಾವತ್ತು ಬರಲಿವೆ ಎಂದು ಅಮೇರಿಕವೆ ಹೇಳಲಿದೆ.
ಸಧ್ಯಕ್ಕೆ ಭಾರತದಲ್ಲಿ ಇರುವ ವೆಂಟಿಲೇಟರುಗಳ ಸಂಖ್ಯೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಸೇರಿ 48 ಸಾವಿರ. ಈ ಬರಹ ಬರೆಯುತ್ತಿರುವ ಹೊತ್ತಿಗೆ ಭಾರತದಲ್ಲಿ 1 ಲಕ್ಷದ ಆರು ಸಾವಿಕ್ಕಿಂತಲೂ ಹೆಚ್ಚು ಕೊರೊನಾ ಪ್ರಕರಣಗಳು ಹಾಗೂ 3300 ಕ್ಕಿಂತಲೂ ಹೆಚ್ಚು ಸಾವುಗಳು ಸಂಭವಿಸಿವೆ. ಕೊರೊನಾ ತಡೆಯಲು ಯಾವುದೇ ಮಾಹಿತಿಯಿಲ್ಲದೆ ಏಕಾಏಕಿ ಲಾಕ್‌ಡೌನ್ ಮಾಡಿದ ಪರಿಣಾಮ ದೇಶದಾದ್ಯಂತ ಹೆದ್ದಾರಿಗಳಲ್ಲೇ ನೂರಾರು ಜೀವಗಳು ಅಸುನೀಗಿವೆ.
ಹಾಸ್ಯಾಸ್ಪದವೆಂದರೆ ಮೇ 12 ರಂದು ’ಆತ್ಮನಿರ್ಭರ ಭಾರತ’ ಎಂದು ಘೋಷಿಸಿ, ಸ್ವಾವಲಂಬಿಗಳಾಗುವ ಬಗ್ಗೆ ಪಾಠ ಹೇಳಿದ ಪ್ರಧಾನಿ ಮೇ 16 ರಂದು ಅಮೆರಿಕ ದಾನ ನೀಡಿದ್ದಕ್ಕಾಗಿ ಧನ್ಯವಾದ ಹೇಳುತ್ತಾರೆ. ಆದರೆ ದೇಶದ ಹೆದ್ದಾರಿಗಳಲ್ಲಿ ನಡೆಯುತ್ತಿರುವ ದೇಶವನ್ನು ಕಟ್ಟಿ ಬೆಳೆಸಿದ ಲಕ್ಷಾಂತರ ಜನರ ಬದುಕು ಬರ್ಭರವಾಗಿರುವುದರ ಬಗ್ಗೆ ನಮ್ಮ ಪ್ರಧಾನಿ ಇನ್ನೂ ಒಂದು ಮಾತೂ ಆಡಿಲ್ಲ.
ಇವೆಲ್ಲವನ್ನೂ ಬಿಡಿ, ದೊಡ್ಡಣ್ಣ ಎಣಿಸಿ ಕೊಂಡಿರುವ ಅಮೆರಿಕಾ ನಮಗೆ 200 ವೆಂಟಿಲೇಟರ್ ದಾನ ನೀಡುತ್ತೇವೆ ಎಂದಿದೆ. ಆದರೆ ಅಮೆರಿಕಾದಲ್ಲಿ ಇದುವರೆಗೂ 15 ಲಕ್ಷದ ಹದಿನೈದು ಸಾವಿರ ಕೊರೊನಾ ಸೋಂಕಿತರು ಇದ್ದು, 92 ಸಾವಿರಕ್ಕಿಂತಲೂ ಹೆಚ್ಚು ಜನರು ಸೋಂಕಿನಿಂದ ಸಾವಿಗೀಡಾಗಿದ್ದಾರೆ. ವಿಶ್ವದಲ್ಲೇ ಅತೀ ಹೆಚ್ಚು ಕೊರೊನಾಸೋಂಕಿತರಿರುವ ದೇಶವದು. ಅಲ್ಲಿನ ವೈದ್ಯರು ಅಮೆರಿಕಾದಲ್ಲಿ ಸಾಕಷ್ಟು ವೆಂಟಿಲೇಟರ್ ಇಲ್ಲವೆಂದು ಹೇಳುತ್ತಿದ್ದಾರೆ. ವರದಿಯೊಂದರ ಪ್ರಕಾರ ಅಮೇರಿಕಾದಲ್ಲಿ ಸಧ್ಯಕ್ಕೆ 9 ಲಕ್ಷ ಜನರಿಗೆ ವೆಂಟಿಲೇಟರುಗಳ ಅಗತ್ಯವಿದೆ. ಆದರೆ ಅಲ್ಲಿರುವ ವೆಂಟಿಲೇಟರುಗಳು 2 ಲಕ್ಷ ಮಾತ್ರ.
ಒಟ್ಟಿನಲ್ಲಿ ತನ್ನ ದೇಶದ ಬಗ್ಗೆ ಯಾವುದೆ ಕಾಳಜಿಯಿಲ್ಲದ ನಾಯಕರಿಬ್ಬರು ಕೊರೊನಾದಂತಹ ಜಾಗತಿಕ ಬಿಕ್ಕಟ್ಟಿನಲ್ಲೂ ಪ್ರಚಾರದಲ್ಲಿರಲು ಹಾಗೂ ಪ್ರಚಾರ ಪಡೆಯಲು ಹವಣಿಸುತ್ತಲೇ ಇದ್ದಾರೆ. ಅದಕ್ಕಾಗಿ ಕೆಲವು ತುತ್ತೂರಿ ಊದುವ ಮಾಧ್ಯಮಗಳು ಕಾಯುತ್ತಲೇ ಇದೆ.


Comments
Post a Comment