ಸ್ವಯಂ ಘೋಷಿತ ರಕ್ಷಕರ ಪಾಠ ಬ್ಯಾರಿಗಳಿಗೆ ಬೇಡ; ಅವರಿಂದ ಎಚ್ಚರಿಕೆ!

ಹಿಂದೊಮ್ಮೆ ಮಂಗಳೂರಿನ ಖ್ಯಾತ ವಕೀಲರೊಬ್ಬರ ಅಕ್ಕನ ಮಗ ತನ್ನ ಪರಿಚಯದ ಮುಸ್ಲಿಂ ಹುಡುಗಿಯೊಂದಿಗೆ ಮಾತನಾಡಿದ ಎಂಬ ಕಾರಣಕ್ಕೆ ಹಲ್ಲೆ ನಡೆಸಿದ, ಅದನ್ನು ಸಮರ್ಥಿಸಿದ ಸ್ವಯಂ ಘೋಷಿತ ಮುಸ್ಲಿಂ ರಕ್ಷಕರು ಈಗ ಮಾರಲ್ ಪೊಲೀಸಿಂಗ್ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಿದ್ದಾರೆ.

ಬೇರೆ ಬೇರೆ ಧರ್ಮಿಯ ಜೋಡಿಗಳು ಒಟ್ಟಿಗೆ ಇದ್ದಾಗ ಹಲ್ಲೆ ನಡೆಸುವುದು ಮಾತ್ರ ನೈತಿಕ ಪೊಲೀಸ್‌ಗಿರಿ ಅಲ್ಲ. 

ಎಲ್ಲರನ್ನೂ ಸಮಾನವಾಗಿ ನೋಡಬೇಕಾದ ಮುಸ್ಲಿಂ ಜನಪ್ರತಿನಿಧಿಯೊಬ್ಬ ಜಾತ್ರೆ ಅಥವಾ ಕೋಲಗಳಿಗೆ ತೆರಳಿ ಅವರ ಗೌರವಗಳನ್ನು ಸ್ವೀಕರಿಸಿದರೆ ಅಂತಹ ಜನಪ್ರತಿನಿಧಿಯನ್ನು ಅವಹೇಳನ, ಚಾರಿತ್ರ್ಯ ಹರಣ, ಅಪಪ್ರಚಾರ ಮಾಡಿ ಅವರಿಗೆ ನೈತಿಕತೆ ಬೋಧಿಸುವುದು ಕೂಡಾ ನೈತಿಕ ಪೊಲೀಸ್‌ಗಿರಿಯೆ.


ಇದನ್ನೆಲ್ಲ ದಂಡಿಯಾಗಿ ಮಾಡುತ್ತಿದ್ದ ಸ್ವಯಂಘೋಷಿತ ಮುಸ್ಲಿಂ ಧರ್ಮ ರಕ್ಷಕರು ಈಗ ಮಾರಲ್ ಪೊಲೀಸಿಂಗ್ ಬಗ್ಗೆ ಪಾಠ ಮಾಡುತ್ತಿದ್ದಾರೆ. ಜೊತೆಗೆ ತಮ್ಮನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದ್ದೇ ಕರಾವಳಿಯಲ್ಲಿ ಇದೆಲ್ಲಾ ನಡೆಯಲು ಕಾರಣ ಎಂದು ಅಮಾಯಕರನ್ನು ನಂಬಿಸುತ್ತಿದ್ದಾರೆ.‌

ಹಾಗೆ ನೋಡಿದರೆ ಕರಾವಳಿಯಲ್ಲಿ ಹಿಂದಿನಿಂದಲೂ ಮುಸ್ಲಿಮರ ವಿರುದ್ಧ ಸಂಘಪರಿವಾರ ದ್ವೇಷ ಹಬ್ಬಿಸುತ್ತಲೆ ಇದೆ. ಈ ಸ್ವಯಂ ಘೋಷಿತ ಮುಸ್ಲಿಂ ರಕ್ಷಕರು ಬಂದು ಮೇಲಂತೂ ಸಂಘಪರಿವಾರದ ಕೆಲಸವನ್ನು ಸುಲಭ ಮಾಡಿಕೊಟ್ಟಿದ್ದೇ ಹೆಚ್ಚು.‌

ಧರ್ಮ‌ ರಕ್ಷಣೆಯ ಹೆಸರಿನಲ್ಲಿ ಹಲವಾರು ಅಮಾಯಕ ಮುಸ್ಲಿಂ ಯುವಕರನ್ನು ಸೆಳೆದು ಅವರನ್ನು ಜೈಲಿಗೆ‌ ಕಳುಹಿಸಿದ್ದೇ ಇವರ ಸಾಧನೆ ಹೊರತು, ಯಾವ ಮುಸ್ಲಿಮರ ರಕ್ಷಣೆಯು ಆಗಿಲ್ಲ. ಇವರಿಂದಾಗಿ ಅಣ್ಣ ತಮ್ಮಂದಿರ ತರ ಇದ್ದ ಸೌಹಾರ್ದತೆಯ ಊರುಗಳಲ್ಲಿ ಹಿಂದೂ ಮುಸ್ಲಿಮರು ಅನುಮಾನದಿಂದ ನೋಡುವಂತಾಯಿತು.

Comments