ಕೆಎಸ್ ಹೆಗಡೆ ಆಸ್ಪತ್ರೆಯ ವೈದ್ಯಕೀಯ ಮಾಫಿಯಾದಿಂದ ನಲುಗಿದ ಯುವಕ ನೌಶಾದ್‌ನ ಕತೆ

ಇವರು ನೌಷಾದ್ ಕುರ್ನಾಡು, ವಯಸ್ಸು 27. ರಿಕ್ಷಾ ಡ್ರೈವರ್ ಒಬ್ಬರ ಮಗ. 2021ರ ವರೆಗೂ ನಮ್ಮ ನಿಮ್ಮೆಲ್ಲರ ಹಾಗೆ ಕುಟುಂಬವನ್ನು ಸಲಹುವ ಉದ್ದೇಶದಿಂದ ಗಲ್ಫ್‌‌ನಲ್ಲಿ ದುಡಿಯುತ್ತಿದ್ದವರು. 2021ರ‌ ನವೆಂಬರ್ ತಿಂಗಳಲ್ಲಿ ಊರಿಗೆ ಬಂದಿದ್ದ ನೌಶಾದ್‌ಗೆ ಸಣ್ಣದೊಂದು ಬೈಕ್ ಆಕ್ಸಿಡೆಂಟ್ ಆಗಿ ಕಾಲು ಚೂರು ನೋವಾಗಿತ್ತು.‌ 

ಈ ವೇಳೆ ಅವರು ಮಂಗಳೂರಿನ ದೇರಳಕಟ್ಟೆಯಲ್ಲಿ ಇರುವ ಕೆ.ಎಸ್.ಹೆಗಡೆ ಆಸ್ಪತ್ರೆಗೆ ದಾಖಲಾಗಿದ್ದರು. ಅಪಘಾತದಿಂದಾಗಿ ಅವರ ಕಾಲಿನಲ್ಲಿ ಯಾವುದೇ ಗಾಯ, ಮೂಳೆ ಮುರಿತಗಳಿಲ್ಲದೆ ತೀವ್ರ ನೋವು ಮಾತ್ರ ಇದ್ದುವುದರಿಂದ ಸ್ಕಾನಿಂಗ್ ಸಹಿತ ಎಲ್ಲಾ ವಿಧದ ಪರೀಕ್ಷೆಗಳಿಗೆ ಅವರನ್ನು ಆಸ್ಪತ್ರೆಯಲ್ಲಿ ಒಳಪಡಿಸಲಾಗಿತ್ತು. 

ಆ ‌ವೇಳೆ ಅವರ ಎಲ್ಲಾ ವರದಿಗಳು ತಕ್ಷಣ ದೊರಕಿದ್ದರಿಂದ, ಅದರ ಆಧಾರದಲ್ಲಿ ಯಾವುದೇ ಗಂಭೀರ ಸಮಸ್ಯೆಗಳಿಲ್ಲ ಎಂದು ಕೆಎಸ್ ಹೆಗಡೆ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಜೊತೆಗೆ ಸಾಮಾನ್ಯ ಚಿಕಿತ್ಸೆ, ವಿಶ್ರಾಂತಿಗಾಗಿ ಒಂದು ದಿನ ಆಸ್ಪತ್ರೆಯಲ್ಲಿ ದಾಖಲಾಗುವಂತೆ ಸೂಚಿಸಿದ್ದರು. 
ಆದರೆ ಮರು ದಿನ ಕಾಲು ವಿಪರೀತ ನೋವು ಇರುವುದಾಗಿ ನೌಶಾದ್ ತಿಳಿಸಿದಾಗ ಮತ್ತೊಂದು ದಿನ ಆಸ್ಪತ್ರೆಯಲ್ಲೇ ಇದ್ದು ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಹೀಗೆ ನೌಶಾದ್ ಅವರನ್ನು ಮೂರು ದಿನಗಳ ಕಾಲ ಈ ರೀತಿ ಆಸ್ಪತ್ರೆಯಲ್ಲಿ ಉಳಿಸಲಾಗಿತ್ತು. 

ಮೂರು ದಿನಗಳ ನಂತರ ಹಿರಿಯ ಪರಿಣಿತ ವೈದ್ಯರು‌‌ ನೌಶಾದ್‌ನನ್ನು ಪರಿಶೀಲಿಸಿದ್ದಾರೆ. ಈ ವೇಳೆ ನೌಶಾದ್ ಕಾಲಿನ ಪರಿಸ್ಥಿತಿ ಗಂಭೀರವಾಗಿದೆ ಎಂದು ಕಂಡುಕೊಂಡ ಅವರು, ನೌಶಾದ್‌ನನ್ನು ಅವರ ಕುಟುಂಬಕ್ಕೂ ತಿಳಿಸದೆ, ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. 
ನಂತರ ಅಲ್ಲಿನ ನುರಿತ ವೈದ್ಯರು ಪರಿಶೀಲ‌‌ನೆ ನಡೆಸಿದ್ದು, ಕಾಲಿನ ಮೊಣಕಾಲಿನ ಬಳಿ ರಕ್ತನಾಳ ತುಂಡರಿಸಲ್ಪಟ್ಟಿರುವುದರಿಂದ ರಕ್ತ ಸಂಚಾರವಿಲ್ಲದೆ ಮೊಣಕಾಲಿನ ಕೆಳಗಡೆ ಕಾಲು ಗಂಭೀರವಾಗಿ ಘಾಸಿಗೊಂಡಿರುವುದಾಗಿ ತಿಳಿಸಿದ್ದಾರೆ.

ಅಪಘಾತ ನಡೆದ 24 ತಾಸಿನಲ್ಲಿ ಸೂಕ್ತ ಚಿಕಿತ್ಸೆ ದೊರಕಿದ್ದರೆ ಕಾಲು ಉಳಿಯುತ್ತಿತ್ತು. ಮೂರು ದಿನಗಳು ಕಳೆದಿರುವುದರಿಂದ ಕಾಲು ಕತ್ತರಿಸಬೇಕಾದ ಅನಿವಾರ್ಯತೆಯ ಕುರಿತು ಫಾದರ್ ಮುಲ್ಲರ್ ‌ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಕಾಲು ಉಳಿಸುವ ಎಲ್ಲಾ ಪ್ರಯತ್ನಗಳು ವಿಫಲಗೊಂಡು ಕೊನೆಗೂ ನೌಶಾದ್‌ನ ಎಡಗಾಲನ್ನು ಕತ್ತರಿಸಿ ತೆಗೆಯಲಾಗಿದೆ.
ಕೆಎಸ್ ಆಸ್ಪತ್ರೆಯಲ್ಲಿ ನಡೆಸಿದ ಸ್ಕಾನಿಂಗ್ ಸಹಿತ ಎಲ್ಲಾ ಪರೀಕ್ಷೆಗಳ ವರದಿಯಲ್ಲಿ ರಕ್ತನಾಳ ತುಂಡರಿಸಲ್ಪಟ್ಟಿರುವುದು ಸ್ಪಷ್ಟವಾಗಿ ನಮೂದಾಗಿದ್ದರೂ, ಅಲ್ಲಿ ಆ ಕುರಿತು ಚಿಕಿತ್ಸೆಯೇ ನೀಡದೆ ಮೂರು ದಿನಗಳ ಕಾಲ ಸಮಯ ವ್ಯರ್ಥ ಮಾಡಿರುವುದು, ತಪ್ಪಾದ ಚಿಕಿತ್ಸೆ ನೀಡಿರುವುದರಿಂದ 27ರ ವಯಸ್ಸಿನ ಯುವಕ ನೌಶಾದ್ ಒಂದು ಕಾಲನ್ನು ಕಳೆದು ಕೊಂಡು ಪೂರ್ಣಪ್ರಮಾಣದ ಅಂಗವಿಕಲರಾಗಿದ್ದಾರೆ.

ನೌಶಾದ್ ಈಗ ತನ್ನ ವಿದೇಶದ ಉದ್ಯೋಗ ಹಾಗೂ ಬದುಕಿನ ಭವಿಷ್ಯವನ್ನು ಕಳೆದುಕೊಂಡಿದ್ದಾರೆ. ಅವರ ತಂದೆ-ತಾಯಿ ಆತನ‌ ಭವಿಷ್ಯ ನೆನೆದು ಆತಂಕದಲ್ಲಿ ಇದ್ದಾರೆ. 

ತಪ್ಪಾದ ಚಿಕಿತ್ಸೆಯಿಂದ ಕಾಲು ಕಳೆದುಕೊಂಡ ನೌಶಾದ್ ಬಗ್ಗೆ ಕೆಎಸ್ ಹೆಗಡೆ ಆಸ್ಪತ್ರೆಯ ಆಡಳಿತ ಮಂಡಳಿಗೆ ಸಂಪೂರ್ಣ ಮಾಹಿತಿ ಇದೆ. ಹಾಗಾಗಿಯೇ ಆಸ್ಪತ್ರೆಯ ಮುಖ್ಯಸ್ಥ ಡಾ.ವಿಶಾಲ್ ಹೆಗ್ಡೆ ಸ್ಥಳೀಯ ಶಾಸಕ ಯು.ಟಿ. ಖಾದರ್ ಜೊತೆ ನೌಶಾದ್ ‌ಮನೆಗೆ ಭೇಟಿ ನೀಡಿ ಪರಿಹಾರ ನೀಡುವ ಬಗ್ಗೆ ಕೂಡಾ ಮಾತು ಕೊಟ್ಟಿದ್ದರು. ಅವರ ಮಾತನ್ನು ನೌಶಾದ್ ಕುಟುಂಬ ನಂಬಿದ್ದರಿಂದ ಅವರು ಆಸ್ಪತ್ರೆಯ ವಿರುದ್ಧ ಪ್ರಕರಣ ಕೂಡಾ ದಾಖಲಿಸಿರಲಿಲ್ಲ.
ಕೆಎಸ್ ಹೆಗಡೆ ಆಸ್ಪತ್ರೆಯ ಮುಖ್ಯಸ್ಥನ ಮಾತು ನಂಬಿದ್ದ ನೌಶಾದ್ ಮತ್ತು‌‌ ಅವರ ಕುಟುಂಬ ಒಂದು ವರ್ಷಕ್ಕಿಂತಲೂ ಹೆಚ್ಚಿನ ಕಾಲ ಅಲೆದಾಡಿದ್ದಾರೆ.‌ ಆದರೆ ಮತ್ತೆ ಅವರ ಲಕ್ಷಾಂತರ ರೂಪಾಯಿ ಖರ್ಚಾಗಿದ್ದು ಮಾತ್ರವಲ್ಲದೆ, ಯಾವ ಉಪಯೋಗ ಕೂಡಾ ಆಗಲಿಲ್ಲ. 

ಇದರ ನಂತರ ನೌಶಾದ್ ಅವರು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರ ಮೂಲಕ ಆಸ್ಪತ್ರೆಗೆ ಅರ್ಜಿ ಸಲ್ಲಿಸಿ ಪರಿಹಾರ ನೀಡುವಂತೆ ವಿನಂತಿಸಿದ್ದರು. ಒಂದು ವಾರದಲ್ಲಿ ಪರಿಹಾರ ನೀಡುವುದಾಗಿ ಕೆಎಸ್ ಹೆಗಡೆ ಆಸ್ಪತ್ರೆಯ ಮುಖ್ಯಸ್ಥ ಡಾ. ವಿನಯ್ ಹೆಗಡೆ ಹೇಳಿದ್ದರೂ ಮತ್ತೆ ನೌಶಾದ್‌ನನ್ನು ಆಟವಾಡಿ ವಂಚಿಸಿದ್ದಾರೆ. 
ಮಂಗಳೂರಿನ ಮೆಡಿಕಲ್ ಮಾಫಿಯಾ‌‌ ಹೇಗಿದೆ ನೋಡಿ.‌ ಸ್ಥಳೀಯ ಶಾಸಕರ‌ ಮುಂದೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು‌ ಕೂಡಾ ಇನ್ನೂ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ.‌ ದೌರ್ಜನ್ಯಕ್ಕೆ ಒಳಗಾದ ಯುವಕ ಮತ್ತು ಅವರ ಕುಟುಂಬವನ್ನು ವರ್ಷಕ್ಕಿಂತ ಹೆಚ್ಚಿನ ಕಾಲ ಅಲೆದಾಡುವಂತೆ ಮಾಡಲಾಗಿದೆ. 

ಇದೀಗ ಡಿವೈಎಫ್ಐ ಉಳ್ಳಾಲ ವಲಯ ನೌಶಾದ್ ಪರವಾಗಿ ಬೀದಿಗಿಳಿಯುವ ಬಗ್ಗೆ ತೀರ್ಮಾನ ಕೈಗೊಂಡಿದೆ. ಅನ್ಯಾಯಕ್ಕೆ ಒಳಗಾಗಿರುವ ಯುವಕ ನೌಶಾದ್‌ ಮತ್ತು ಅವರ ಕುಟುಂಬಕ್ಕೆ ನ್ಯಾಯ ಸಿಗಲಿ.‌ ಅವರಿಗೆ ನಮ್ಮ ನಿಮ್ಮೆಲ್ಲರ ಬೆಂಬಲವೂ ಇರಲಿ.

Comments

Post a Comment