ರಾಹುಲ್ ಗಾಂಧಿ ಅನರ್ಹ ವಿವಾದ | ಪ್ರಜಾಪ್ರಭುತ್ವವಾದಿಗಳು ಒಗ್ಗಟ್ಟಾಗಬೇಕಿದೆ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್

ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ತರಾತುರಿಯಲ್ಲಿ ರದ್ದುಗೊಳಿಸಿರುವುದು ಪ್ರಜಾಪ್ರಭುತ್ವದ ಮೇಲೆ ಸಂಘಪರಿವಾರ ನಡೆಸುತ್ತಿರುವ ಹಿಂಸಾತ್ಮಕ ದಾಳಿಯ ಅತ್ಯಂತ ಹೊಸ ಅಧ್ಯಾಯವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಹೇಳಿದ್ದು, ಇದರ ವಿರುದ್ಧ ಪ್ರಜಾಪ್ರಭುತ್ವವಾದಿಗಳು ಒಗ್ಗಟ್ಟಾಗಬೇಕಿದೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ರಾಜಕೀಯ ಭಾಷಣದ ಆಧಾರದ ಮೇಲೆ ಪ್ರಕರಣ ದಾಖಲಿಸಿ, ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, "ಅಧಿಕಾರ ಬಳಸಿ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವುದು ಫ್ಯಾಸಿಸ್ಟರ ವಿಧಾನವಾಗಿದೆ. ವಿರೋಧ ಪಕ್ಷದ ಪ್ರಮುಖ ನಾಯಕನ ಮೇಲೆಯೆ ಈ ರೀತಿಯಾಗಿ ದಾಳಿ ನಡೆಸಲಾಗಿದ್ದು, ಪರಿಸ್ಥಿತಿ ಹೀಗಿರುವಾಗ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಜನ ಸಾಮಾನ್ಯರಿಗೆ ಇಲ್ಲಿ ರಕ್ಷಣೆಯಿದೆಯೆ?" ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಸಾಂವಿಧಾನಿಕ ಮೌಲ್ಯಗಳಿಗೆ ನೀಡುವ ಬೆಲೆ ಏನಿದೆ ಎಂದು ಅವರು ಕೇಳಿದ್ದಾರೆ.

"ಬಿಜೆಪಿಯೇತರ ರಾಜ್ಯಗಳಲ್ಲಿ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ನಡೆಸಿದ ರಾಜಕೀಯ ಹಸ್ತಕ್ಷೇಪದಲ್ಲಿ ಹಾಗೂ ಮನೀಶ್ ಸಿಸೋಡಿಯಾ ಮತ್ತು ರಾಹುಲ್ ಗಾಂಧಿ ವಿರುದ್ಧದ ಪ್ರಕರಣಗಳಿಗೆ ದೆಹಲಿಯಲ್ಲಿ ವಿರೋಧ ವ್ಯಕ್ತಪಡಿಸಿದ ವಿರೋಧ ಪಕ್ಷದ ಸಂಸದರನ್ನು ಬಂಧಿಸಿರುವುದು ಕೂಡಾ ಇದರ ಇನ್ನೊಂದು ಭಾಗವಾಗಿದೆ" ಎಂದು ಪಿಣರಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಕೇಂದ್ರ ಸರ್ಕಾರದ ವಿರುದ್ಧ ಪೋಸ್ಟರ್ ಅಂಟಿಸಿದ್ದಕ್ಕಾಗಿ ದೆಹಲಿಯಲ್ಲಿ ಗುಂಪು ಗುಂಪಾಗಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಕೇಂದ್ರ ಸರ್ಕಾರದ ಈ ಯಾವುದೇ ಕ್ರಮಗಳು ನಮ್ಮ ಪ್ರಜಾಸತ್ತಾತ್ಮಕ ಸಮಾಜ ಮತ್ತು ಸಂವಿಧಾನದ ಮೌಲ್ಯಗಳಿಗೆ ಹೊಂದಿಕೆಯಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ.

"ಟೀಕೆಗಳ ಬಗ್ಗೆ ಇರುವ ತೀವ್ರ ಅಸಹಿಷ್ಣುತೆ ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡುತ್ತಿದೆ. ರಾಹುಲ್ ಗಾಂಧಿ ಅವರ ವಿರುದ್ಧ ನಡೆದ ಕ್ರಮಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾಗಿದ್ದು ಮತ್ತು ಈ ಕ್ರಮದ ವಿರುದ್ಧ ತೀವ್ರವಾಗಿ ಪ್ರತಿರೋಧ ಒಡ್ಡಲು ಪ್ರಜಾಪ್ರಭುತ್ವವಾದಿಗಳು ಒಗ್ಗಟ್ಟಿನಿಂದ ಮುಂದೆ ಬರಬೇಕಾಗಿದೆ" ಎಂದು ಅವರು ಹೇಳಿದ್ದಾರೆ.

Comments