ಕಾಮ್ರೇಡ್ ಮುನೀರ್ ಕಾಟಿಪಳ್ಳ ಅವರಿಗೆ ಸ್ಪಷ್ಟತೆಯೂ ಇದೆ, ಬದ್ಧತೆಯು ಇದೆ; ಅಪಪ್ರಚಾರಕ್ಕೊಂದು ಪ್ರತ್ಯುತ್ತರ!

ಆತ್ಮೀಯ ಗೆಳೆಯ Lukman Adyar , ಕಾಮ್ರೇಡ್ ಮುನೀರ್ ಕಾಟಿಪಳ್ಳ ಅವರು ‘ಈ ಬಾರಿ ನಾನು ಸ್ಪರ್ಧಿಸಲ್ಲ’ ಎಂದು ಹೇಳಿದ್ದೂ ಇಲ್ಲ, ಎಲ್ಲೂ ಬರೆದಿದ್ದೂ ಇಲ್ಲ. ಇದು ನಿಮ್ಮ ಬರಹದ ಮೊದಲನೆ ಸುಳ್ಳು. ಅವರ ಸ್ಪರ್ಧೆಯ ವಿಚಾರ ತೀರ್ಮಾನಿಸುವುದು ಸಿಪಿಐಎಂ ಪಕ್ಷವೇ ಹೊರತು ಅವರು ವೈಯಕ್ತಿಕವಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಪಕ್ಷದಲ್ಲಿ ಸಾಧ್ಯವೆ ಇಲ್ಲ. 

ಅದರಾಚೆಗೂ ಬಿಜೆಪಿ ಸೋಲಿಸುವ ಪ್ರಬಲ ಜಾತ್ಯಾತೀತ ಪಕ್ಷಗಳಿಗೆ ಸಿಪಿಐಎಂ ಬೆಂಬಲಿಸುವ ತೀರ್ಮಾನವನ್ನು ಪಕ್ಷ ಐದಾರು ವರ್ಷಗಳ(ನನಗೆ ನೆನಪಿರುವ ಹಾಗೆ) ಹಿಂದೆಯೆ ಕೈಗೊಂಡಿತ್ತು. ಅದನ್ನು ಈ ವರ್ಷವೂ ಪುನರುಚ್ಚರಿಸಿದೆ. ಜಾತ್ಯಾತೀತವಾದಿಗಳಿಗೆ ಬೆಂಬಲಿಸುತ್ತೇವೆ ಎಂಬುವುದು ಸಂಗಾತಿ ಮುನೀರ್ ಕಾಟಿಪಳ್ಳ ಅವರ ವೈಯಕ್ತಿಕ ತೀರ್ಮಾನ ಅಲ್ಲ. 
ನೀವು ಹೇಳುವಂತೆ ಕಾಮ್ರೇಡ್ ಮುನೀರ್ ಸುರತ್ಕಲ್ ಕ್ಷೇತ್ರದಿಂದ ಕನಿಷ್ಠ ಮತಗಳನ್ನು ಪಡೆದಿರಬಹದು. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಚುನಾವಣೆ ನಡೆಯುವ ಈ ವೇಳೆಯಲ್ಲಿ ಸಿಪಿಐಎಂಗೆ ಹಿನ್ನಡೆಯಾಗಿರುವುದು ನಿಜ. ಆದರೆ ಕೇವಲ ಮತಗಳು ಒಬ್ಬ ವ್ಯಕ್ತಿಯ ಪ್ರಭಾವವನ್ನು ಅಳೆಯಲು ಸಾಧ್ಯವಿಲ್ಲ. ನಿಮ್ಮ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಹೇಳಿಕೆ ಅವರ ವ್ಯಕ್ತಿತ್ವವನ್ನು ಕುಗ್ಗಿಸುವ ಪ್ರಯತ್ನದ ಮುಂದುವರೆದ ಭಾಗ. ಅವರ ಸ್ಪರ್ಧೆ ಮಾತ್ರ ನಿಮಗೆ ಆಟಕ್ಕುಂಟು ಎಂದು ಎನಿಸಬಹುದೆ ವಿನಃ ಅವರ ರಾಜಿ ರಹಿತ ಹೋರಾಟ ಅಥವಾ ಬದ್ಧತೆಯಲ್ಲ.

ಕಾಮ್ರೇಡ್ ಮುನೀರ್ ಡಿವೈಎಫ್ಐ ರಾಜ್ಯಾಧ್ಯಕ್ಷರಾಗಿದ್ದು, ಸಂಘಟನೆ ರಾಜ್ಯದಾದ್ಯಂತ ಇದೆ. ಕೆಲವು ಜಿಲ್ಲೆಗಳಲ್ಲಿ ಸಂಘಟನೆ ಬಲಿಷ್ಠವಾಗಿಯೂ ಇದೆ. ಆದ್ದರಿಂದ‌,‌ ಒಂದು ವೇಳೆ,‌ನೀವು ‌ಹೇಳಿದಂತೆ ಅವರು ಹೇಳಿಕೆ ನೀಡಿದ್ದರೂ, ಅದು ಕೇವಲ ಸುರತ್ಕಲ್‌ಗೆ ಮಾತ್ರವಲ್ಲ. ಅವರ ಹೇಳಿಕೆ ಕೇವಲ ಸುರತ್ಕಲ್‌ಗೆ ಮಾತ್ರ ಸೀಮಿತ ಎಂಬುವುದು ನಿಮ್ಮ ಕಲ್ಪನೆ. ಅವರ ಪ್ರಭಾವ ಏನು ಎಂಬುವುದು ಕರಾವಳಿ ಸೇರಿದಂತೆ ರಾಜ್ಯದಾದ್ಯಂತ ಪ್ರಜ್ಞಾವಂತರು ನೋಡಿದ್ದಾರೆ.

ಉಳಿದಂತೆ ಸಿಪಿಐಎಂ ಸ್ಪರ್ಧಿಸದ ಕ್ಷೇತ್ರಗಳಲ್ಲಿ ಪ್ರಬಲ ಜಾತ್ಯತೀತ ಪಕ್ಷಗಳಿಗೆ ಬೆಂಬಲ ನೀಡುವಂತೆ ಪಕ್ಷ ಹೇಳಿದೆ. ಅದು ರಾಜ್ಯದಾದ್ಯಂತ ಇರುವ ಸಂಗಾತಿಗಳಿಗೆ ಮತ್ತು ಪಕ್ಷದ ಮತದಾರರಿಗೆ ಹೇಳಿದ್ದಾಗಿದೆ. ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಹಲವು ಬಗೆಯ ರಾಜಕಾರಣವಿದೆ. ಹಾಗಾಗಿ ಆಯಾ ಜಿಲ್ಲೆಯ ಪ್ರಬಲ ಜಾತ್ಯಾತೀತ ಪಕ್ಷಗಳಿಗೆ ಬೆಂಬಲ ನೀಡುವಂತೆ ಪಕ್ಷ ಹೇಳಿದೆ. ಇಲ್ಲಿ ಯಾವ ಅಡ್ಡಗೋಡೆಯ ದೀಪವೂ ಇಲ್ಲ. ಆಯಾ ಜಿಲ್ಲೆಯಲ್ಲಿ ಅಲ್ಲಿನ ಮತದಾರರಿಗೆ ಯಾರು ಪ್ರಬಲ ಎಂದು ಚೆನ್ನಾಗಿಯೆ ಗೊತ್ತಿರುತ್ತದೆ. 
ಬಿಜೆಪಿಯನ್ನು ಸಿಪಿಎಂ ಶತಾಯಗತಾಯ ಒಪ್ಪುವುದಿಲ್ಲ ಎಂಬುವುದು ನಿಜವೇ. ಇನ್ನು ಕಾಂಗ್ರೆಸ್ ಬಗ್ಗೆ ಪಕ್ಷದ ನಿಲುವು ನೀವು ಹೇಳಿದಂತೆ ಬಿಜೆಪಿಯದ್ದೇ ರೀತಿಯ ನಿಲುವು CPIMಗೆ ಇಲ್ಲ. ಸಿಪಿಎಂ ಈಗಾಗಲೆ ಪಶ್ಚಿಮ ಬಂಗಾಳ, ಬಿಹಾರ, ತ್ರಿಪುರ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಅಲ್ಲದೆ, ಮೊದಲನೆ ಯುಪಿಎ ಸರ್ಕಾರದಲ್ಲಿ ಸಿಪಿಐಎಂ ಪ್ರಮುಖ ಮೈತ್ರಿ ಪಕ್ಷವಾಗಿತ್ತು. ಆದರೆ ಕೇರಳಲ್ಲಿ ರಾಜಕೀಯ ಸ್ಥಿತಿ ಬೇರೆಯೆ ಇದೆ. ಅದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ.

ಇನ್ನು, ಕಾಮ್ರೇಡ್ ಮುನೀರ್ ಅವರು “ಚುನಾವಣೆಯಲ್ಲಿ ಗೆಲ್ಲುವುದಷ್ಟೆ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಮಾನದಂಡ ಮಾಡಿದೆ, ಇದು ಪ್ರಜಾಪ್ರಭುತ್ವ ಮತ್ತು ಫ್ಯಾಸಿಸಂ ಬಗ್ಗೆ ಸಣ್ಣ ತಿಳಿವಳಿಕೆಯೂ ಇಲ್ಲದವರಿಗೆ ಆದ್ಯತೆ ನೀಡಿದಂತಾಗುತ್ತದೆ”ಎಂದೂ ಹೇಳಿದ್ದರೆ, ಅದರ ಅರ್ಥ ಸರಳ. ಅವರ ಈ ಹೇಳಿಕೆ ಕಾಂಗ್ರೆಸ್‌ನ ಗೆಲ್ಲುವ ತಂತ್ರದ ವಿರೋಧಿ. ಅದರಲ್ಲಿ ಯಾವ ಗೊಂದಲವೂ ಇಲ್ಲ. ಆದರೆ ನೀವು ನಿಮಗೆ ಬೇಕಾದಂತೆ ವ್ಯಾಖ್ಯಾನ ಮಾಡಿಕೊಳ್ಳುತ್ತಿದ್ದೀರಿ. ಸರಳ ವಾಕ್ಯಗಳನ್ನು ಇಷ್ಟೆಲ್ಲಾ ಕಾಂಪ್ಲಿಕೇಟ್ ಯಾಕೆ ಮಾಡುತ್ತೀರೋ ದೇವರಿಗೆ ಗೊತ್ತು.‌
ಸಿಪಿಐಎಂಗೆ ಕೋಮುವಾದಿಗಳ ಬಗ್ಗೆ ಸ್ಪಷ್ಟ ನಿಲುವಿದೆ. ಅದಕ್ಕಾಗಿಯೆ ಎಲ್ಲಾ ರೀತಿಯ ಕೋಮುವಾದಿಗಳು ಸಿಪಿಐಎಂ ಕಂಡರೆ ಗುರ್ ಅಂತಾರೆ. ನಾನು ಕಂಡಂತೆ ಕಾಮ್ರೇಡ್ ಮುನೀರ್‌ಗೆ ಯಾವುದೇ ಬ್ಯಾಲೆನ್ಸಿಂಗ್ ಮಾಡುವ ಅಗತ್ಯವೇ ಇಲ್ಲ. ಅವರು ನುಣುಚಿಕೊಳ್ಳುವುದೂ ಇಲ್ಲ. ಈ ವರೆಗೆ ಅವರ ಬದ್ಧತೆಯ ಮೇಲೆ ಯಾರಿಗೂ ಅನುಮಾನವೂ ಇಲ್ಲ. 
 
ಜಾತ್ಯತೀತವಾದಿಗಳು ಎಂದು ಹೇಳಿದಾಗೆಲ್ಲಾ ನೀವು ಯಾಕೆ ಇಷ್ಟೊಂದು ತಲೆಕೆಡಿಸಿಕೊಳ್ಳುತ್ತೀರಿ ಎಂದು ನನಗೆ ಅರ್ಥ ಆಗುತ್ತಿಲ್ಲ. ಕಾಮ್ರೇಡ್ ಮುನೀರ್ ಮತ್ತು ಅವರ ಪಕ್ಷ ಖಂಡಿತವಾಗಿಯೂ ಕೋಮುವಾದಿಗಳನ್ನು ಗುರಿ ಮಾಡುತ್ತಿದ್ದಾರೆ. ಮತ್ತೆ ಈ ಕೋಮುವಾದಿಗಳು ಯಾರು ಎಂದು ಕೂಡಾ ಸ್ಪಷ್ಟವಾಗಿ ಹೇಳಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಸಿಪಿಐಎಂ ಹೇಳಿಕೆಯಲ್ಲಿ ನಿಖರತೆ, ಸ್ಪಷ್ಟತೆ ಮತ್ತು ಪ್ರಬುದ್ಧತೆ ಇದೆ.

ನೀವು ಏನೇನೋ ಕಲ್ಪಿಸಿಕೊಂಡು, ವ್ಯಾಖ್ಯಾನ ಮಾಡಿಕೊಂಡು ಗೊಂದಲ ಮಾಡಿಕೊಂಡಿದ್ದೀರಿ. ಜೊತೆಗೆ ಇತರರಿಗೂ ಗೊಂದಲ ಹುಟ್ಟಿಸಿದ್ದೀರಿ.  

ಅಷ್ಟೇ.

(ಲುಕ್ಮಾನ್ ಅಡ್ಯಾರ್ ಇತ್ತೀಚೆಗೆ ಪೈಡ್ ಬರಹ ಬರೆಯುತ್ತಿದ್ದಾರೆ, ಅವರ ಇತ್ತೀಚೆಗಿನ ಫೇಸ್ಬುಕ್ ಬರಹ ಹಾಗೆ ಕಾಣುತ್ತಿದೆ ಎಂದು ನನ್ನ ಕಿವಿ ಕಚ್ಚುವ ಸ್ನೇಹಿತರಲ್ಲಿ ಹೇಳುವುದು ಇಷ್ಟೇ 👇🏿
👉🏿 "ಲುಕ್ಮಾನ್ ಅಡ್ಯಾರ್ ಅವರನ್ನು ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದೇವೆ.‌ ನನ್ನ‌ ಹತ್ತಿರದ ಸ್ನೇಹಿತರಲ್ಲಿ ಅವರೂ ಒಬ್ಬರು. ನನಗೆ ಈವರೆಗೆ ಅವರ ಫೇಸ್ಬುಕ್ ಬರಹ ಪೈಡ್ ಬರಹ ಎಂದು ಅನಿಸಿಲ್ಲ ಮತ್ತು ಕಂಡಿಲ್ಲ. 

ಅಷ್ಟೇ ✊🏿)

Comments