ಬೊಮ್ಮಾಯಿ ವಿರುದ್ಧ ಕಾಂಗ್ರೆಸ್‌ನಿಂದ ಮುಸ್ಲಿಂ ಅಭ್ಯರ್ಥಿ! | ಈ ಮುಸ್ಲಿಂ ಅಭ್ಯರ್ಥಿ ಹರಕೆಯ ಕುರಿ ಎಂಬುದು ನಿಜವೇ?


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಕಾಂಗ್ರೆಸ್ ಮುಸ್ಲಿಂ ಸಮುದಾಯದ‌‌ ವ್ಯಕ್ತಿಗೆ ಟಿಕೆಟ್ ನೀಡಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹರಕೆಯ‌ ಕುರಿಯಾಗಿಸಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ವಾಸ್ತವವಾಗಿ ಅದು ನಿಜವೇ? ಈ ಬಗ್ಗೆ ಪರಿಶೀಲನೆ ಮಾಡೋಣ ಬನ್ನಿ. 

ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಯೂಸುಫ್ ಸವಣೂರು ಅವರಿಗೆ ಪಕ್ಷದಿಂದ ಟಿಕೇಟ್ ನೀಡಿತ್ತು. ಆದರೆ ನಂತರ ಬಿಡುಗಡೆ ಆದ ಪಟ್ಟಿಯಲ್ಲಿ ಕ್ಷೇತ್ರದ ಟಿಕೆಟ್ ಬದಲಿಸಿ, ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರಿಗೆ ಟಿಕೇಟ್ ನೀಡಿದೆ.

ಹಾಗೆ ನೋಡಿದರೆ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಪ್ರತಿ ಬಾರಿಯೂ ಮುಸ್ಲಿಂ ಅಭ್ಯರ್ಥಿಯನ್ನು ನಿಲ್ಲಿಸುತ್ತಲೆ ಬಂದಿದೆ. 2008, 2013 ಮತ್ತು 2018 ರಲ್ಲಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಡಿದ್ದು ಮುಸ್ಲಿಂ ವ್ಯಕ್ತಿಯನ್ನೆ. ಯಾಕೆಂದರೆ, ಅಭ್ಯರ್ಥಿಯೊಬ್ಬನ ಗೆಲುವು ನಿರ್ಧಾರ ಮಾಡುವಷ್ಟು ಮತಗಳು ಮುಸ್ಲಿಂ ಸಮುದಾಯದೊಂದಿಗೆ ಇವೆ.

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಎಸ್ಸಿ, ಕುರುಬ ಮತ್ತು ಮುಸ್ಲಿಂ ಮತಗಳನ್ನು ಪಡೆಯಲು ಸಾಧ್ಯ ಆದರೆ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಮನೆಗೆ ಕಳುಹಿಸಬಹುದು. 
ಕ್ಷೇತ್ರದಲ್ಲಿ ಮುಸ್ಲಿಮರ 28%(59 ಸಾವಿರ) ಮತಗಳು ಇದ್ದರೆ, ಕುರುಬ ಸಮುದಾಯದ ಮತಗಳು ಅಲ್ಲಿ 14%(30 ಸಾವಿರ) ಇವೆ. ಈ ಮತಗಳು ಬಿಜೆಪಿ ವಿರುದ್ಧ ಸರಿಯಾಗಿ ಚಲಾವಣೆ ಆದರೆ ಅಲ್ಲಿ ಬಿಜೆಪಿ ಸೋಲಿನ ಹತ್ತಿರ ಬರುತ್ತದೆ. 

ಇನ್ನು, 13%(28 ಸಾವಿರ) ಇರುವ ಎಸ್ಸಿ ಸಮುದಾಯದ ಮತಗಳನ್ನು ಕೂಡಾ ಸೆಳೆದರೆ ಅಲ್ಲಿ ಬಿಜೆಪಿಯನ್ನು ಧೂಳಿಪಟ ಮಾಡಬಹುದು.‌ ಆದರೆ ಕಾಂಗ್ರೆಸ್ ಈ ಮತಗಳನ್ನು ಹೇಗೆ ಸೆಳೆಯಲಿದೆಯೆ ಎಂಬುವುದೇ ಸಧ್ಯದ ಪ್ರಶ್ನೆ.

ಉಳಿದಂತೆ, ಬಿಜೆಪಿಯ ಸಾಂಪ್ರದಾಯಿಕ ಮತಗಳು ಎಂದು ಹೇಳಲಾಗುವ ಪಂಚಮಶಾಲಿ ಸಮುದಾಯದ 40 ಸಾವಿರ ಮತಗಳು ಅಲ್ಲಿವೆ. 

ವಿಶೇಷ ಏನೆಂದರೆ ಕಳೆದ ಆರು ಪ್ರಮುಖ(ವಿಧಾನಸಭೆ ಮತ್ತು ಲೋಕಸಭೆ) ಚುನಾವಣೆಗಳಲ್ಲಿ ಶಿಗ್ಗಾಂವಿ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಒಮ್ಮೆಯೂ ಅಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಹೆಚ್ಚು ಮತಗಳನ್ನು ಪಡೆದಿದ್ದಿಲ್ಲ.
2018ರಲ್ಲಿ ಬೊಮ್ಮಾಯಿ ಈ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ 83,868 ( 49.3%) ಮತಗಳನ್ನು ಪಡೆದಿದ್ದರು. ಅವರ ಎದುರಾಳಿ ಕಾಂಗ್ರೆಸ್‌ನ ಸೈಯ್ಯದ್ ಅಜೀಂಪೀರ್ ಖಾದ್ರಿ(ಕಳೆದ ಮೂರು ವಿಧಾನಸಭಾ ಚುನಾವಣೆಯಲ್ಲಿ ಇವರೇ ಕಾಂಗ್ರೆಸ್ ಅಭ್ಯರ್ಥಿ) 74,603 (43.61) ಮತಗಳನ್ನು ಪಡೆದಿದ್ದಾರೆ.

ಅಂದರೆ ಬೊಮ್ಮಾಯಿ 9,265 ಮತಗಳಿಂದ (5.4%) ಕಾಂಗ್ರೆಸ್‌ನ ತಮ್ಮ ಪ್ರಬಲ ಎದುರಾಳಿಯ ವಿರುದ್ಧ ಗೆದ್ದಿದ್ದರು. ಆದರೆ ಬೊಮ್ಮಾಯಿ ಅವರ ಗೆಲುವಿನ ಅಂತರ ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಕಡಿಮೆ ಆಗುತ್ತಲೆ ಬಂದಿದೆ.

Comments