Green Asha | ಹಾರ್ಮುಜ್ ದಾಟಿದ ಭಾರತದ 8ನೇ ಹಡಗು


ಭಾರತದ ಧ್ವಜ ಹೊಂದಿರುವ ‘ಗ್ರೀನ್ ಆಶಾ’ ಹಡಗು ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದೆ ಎಂದು ಅಧಿಕೃತ ಮೂಲಗಳು ಸೋಮವಾರ ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿವೆ. ಫೆಬ್ರವರಿ 28ರಂದು ಸಂಘರ್ಷ ಆರಂಭವಾದ ನಂತರ ಈ ಮಾರ್ಗದ ಮೂಲಕ ಹಾದುಹೋದ ಎಂಟನೇ ಎಲ್‌ಪಿಜಿ ಹಡಗು ಇದಾಗಿದೆ.

ಇದಕ್ಕೂ ಮೊದಲು, ಭಾರತದ ಮತ್ತೊಂದು ಬೃಹತ್ ಅನಿಲ ಸಾಗಣೆ ಹಡಗು ‘ಗ್ರೀನ್ ಸಾನ್ವಿ’ ಕೂಡ ಶುಕ್ರವಾರ ರಾತ್ರಿ ಸುಮಾರು 46,650 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತು ಈ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿತ್ತು. 

ಮಾರ್ಚ್ 28 ರಂದು, 47,000 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಹಡಗು ಗುಜರಾತ್‌ನ ಜಾಮ್‌ನಗರದ ಡಿಪಿಎ ಕಾಂಡ್ಲ ಬಂದರಿನ ವದಿನಾರ್ ಟರ್ಮಿನಲ್‌ಗೆ ತಲುಪಿದೆ. ‘ಎಂ.ಟಿ ಜಗ್ ವಸಂತ್’ ಎಂಬ ಈ ಹಡಗು ತನ್ನಲ್ಲಿರುವ ಅನಿಲವನ್ನು ಸಮುದ್ರದ ನಡುವೆಯೇ ಮತ್ತೊಂದು ಹಡಗಿಗೆ ವರ್ಗಾಯಿಸಲು (STS operation) ನಿರ್ಧರಿಸಲಾಗಿದೆ.

ಭದ್ರತಾ ಆತಂಕದ ನಡುವೆ ಈ ಭಾಗದಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳಿಗೆ ಬೆಂಬಲ ನೀಡಲು ಭಾರತೀಯ ನೌಕಾಪಡೆಯ ಯುದ್ಧನೌಕೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಭಾರತೀಯ ಹಡಗುಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಇರಾನ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವ ನಡುವೆಯೇ ಈ ಬೆಳವಣಿಗೆಗಳು ನಡೆದಿವೆ.

ಭಾರತದ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯದ ಪ್ರಕಾರ, ಪ್ರಸ್ತುತ ಪರ್ಷಿಯನ್ ಕೊಲ್ಲಿಯಲ್ಲಿ ಸುಮಾರು 485 ನಾವಿಕರನ್ನು ಒಳಗೊಂಡ 18 ಭಾರತೀಯ ಹಡಗುಗಳಿವೆ. ಈ ಎಲ್ಲಾ ಹಡಗುಗಳು ಮತ್ತು ಸಿಬ್ಬಂದಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂದರುಗಳು ಮತ್ತು ಹಡಗು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮುಕೇಶ್ ಮಂಗಲ್ ಅವರು ಮಾತನಾಡಿ, ಈ ವಿಷಯದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದುವರೆಗೆ 964 ಕ್ಕೂ ಹೆಚ್ಚು ನಾವಿಕರನ್ನು ತಾಯ್ನಾಡಿಗೆ ಮರಳಿ ಕರೆತರಲಾಗಿದೆ. ಭಾರತದಾದ್ಯಂತ ಇರುವ ಬಂದರುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಪಶ್ಚಿಮ ಏಷ್ಯಾ ಮತ್ತು ಕೊಲ್ಲಿ ಪ್ರದೇಶದಲ್ಲಿ ಬದಲಾಗುತ್ತಿರುವ ಭದ್ರತಾ ಪರಿಸ್ಥಿತಿಯ ನಡುವೆ ಸುಮಾರು 5.98 ಲಕ್ಷ ಪ್ರಯಾಣಿಕರು ಭಾರತಕ್ಕೆ ಮರಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Comments