ಮಡಿಕೇರಿ ತಾಲ್ಲೂಕಿನ ತಡಿಯಂಡಮೋಳ್ ಬೆಟ್ಟದಲ್ಲಿ ಇತ್ತೀಚೆಗೆ ಕೇರಳ ಮೂಲದ ಯುವತಿಯೊಬ್ಬರು ನಾಪತ್ತೆಯಾಗಿದ್ದ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೋರಿ ಬಿಜೆಪಿಯ ಗ್ರಾಮಾಂತರ ಘಟಕವು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಕೋಯಿಕ್ಕೋಡ್ ಮೂಲದ 36 ವರ್ಷದ ಐಟಿ ಉದ್ಯೋಗಿ ಶರಣ್ಯ ಅವರು ನಾಪತ್ತೆಯಾದ ಸಂದರ್ಭಗಳ ಕುರಿತು ಬಿಜೆಪಿ ದೂರಿನಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿದೆ.
ಇದನ್ನೂ ಓದಿ: ಸ್ವಯಂ ಘೋಷಿತ ವಿಶ್ವಗುರು ಸಂಪೂರ್ಣ ಬಹಿರಂಗ: ಕಾಂಗ್ರೆಸ್
ಯುವತಿ ಆಹಾರವಿಲ್ಲದೆ ನಾಲ್ಕು ದಿನಗಳ ಕಾಲ ಬದುಕುಳಿದಿದ್ದು ಹೇಗೆ? ಅವರು ಹೇಗೆ ನಾಪತ್ತೆಯಾಗಿದ್ದು? ಮತ್ತು ನಂತರ ಪತ್ತೆಯಾದಾಗ ಅವರು ಸುಸ್ತಾಗಿದ್ದ ಯಾವುದೇ ಲಕ್ಷಣಗಳಿರಲಿಲ್ಲ ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಘಟನೆಯ ಹಿಂದೆ ಯಾವುದಾದರೂ ಅದೃಶ್ಯ ಶಕ್ತಿಗಳ ಅಥವಾ ವ್ಯಕ್ತಿಗಳ ಕೈವಾಡವಿದೆಯೇ ಎಂಬುದನ್ನು ತನಿಖೆ ಮಾಡುವಂತೆ ಅಧಿಕಾರಿಗಳನ್ನು ಪಕ್ಷವು ಒತ್ತಾಯಿಸಿದೆ. ಮತ್ತೊಂದೆಡೆ, ಈ ಘಟನೆಯ ಪರ ಮತ್ತು ವಿರೋಧಿ ಚರ್ಚೆಗಳು ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಮುಂದುವರಿದಿವೆ.
ಘಟನೆಯ ವಿವರ:
ಕೊಡಗು ಜಿಲ್ಲೆಯ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ಹೋಗಿದ್ದ ಶರಣ್ಯ ಜಿ.ಎಸ್. (36) ಎಂಬ ಯುವತಿ ನಾಲ್ಕು ದಿನಗಳ ಕಾಲ ಅರಣ್ಯದಲ್ಲಿ ದಾರಿ ತಪ್ಪಿ, ಏಪ್ರಿಲ್ 5ರ ಭಾನುವಾರ ಸುರಕ್ಷಿತವಾಗಿ ಪತ್ತೆಯಾಗಿದ್ದರು. ಇವರು ಕೇರಳದ ಕೋಯಿಕ್ಕೋಡ್ ಜಿಲ್ಲೆಯ ನಾದಪುರಂ ಮೂಲದವರಾಗಿದ್ದು, ಕೊಚ್ಚಿಯಲ್ಲಿ ಐಟಿ ಉದ್ಯೋಗಿಯಾಗಿದ್ದಾರೆ.
ಶರಣ್ಯ ಅವರು ಏಪ್ರಿಲ್ 2ರಂದು ಅರಣ್ಯ ಇಲಾಖೆಯ ಅನುಮತಿ ಪಡೆದು ತಡಿಯಂಡಮೋಳ್‌ಗೆ ಏಕಾಂಗಿ ಚಾರಣ ಪ್ರಾರಂಭಿಸಿದ್ದರು. ಆದರೆ ಅಧಿಕಾರಿಗಳು ಅವರ ವಿವರ ದಾಖಲಿಸಿಕೊಂಡು, ಪ್ರದೇಶದಲ್ಲಿ ಕಾಡಾನೆಗಳು ಇರುವುದರಿಂದ ಗುಂಪಾಗಿ ಚಾರಣ ಕೈಗೊಳ್ಳುವಂತೆ ಸಲಹೆ ನೀಡಿದ್ದರು. ಹಾಗಾಗಿ ಅವರು ಸುಮಾರು 10 ಚಾರಣಿಗರ ಗುಂಪನ್ನು ಸೇರಿಕೊಂಡಿದ್ದರು.
ಇದನ್ನೂ ಓದಿ: ಕದನ ವಿರಾಮ: ಇರಾನ್ ಮುಂದೆ ಸೋಲೊಪ್ಪಿದ ಅಮೆರಿಕ
ಅವರೊಂದಿಗೆ ಹೊರಟಿದ್ದ ಗುಂಪು ಸಂಜೆಯ ವೇಳೆಗೆ ಸುರಕ್ಷಿತವಾಗಿ ಹಿಂತಿರುಗಿದ್ದರು. ಶರಣ್ಯ ಅವರನ್ನು ಕೊನೆಯ ಬಾರಿಗೆ ಬೆಟ್ಟದ ತುದಿಯಲ್ಲಿ ನೋಡಿದ್ದೇವೆಂದು ಕೆಲವು ಚಾರಣಿಗರು ಮಾಹಿತಿ ನೀಡಿದ್ದರು. ನಾಯಿಯೊಂದಿಗೆ ಆಟವಾಡುತ್ತಿದ್ದ ಅವರು, ತಾನೊಬ್ಬಳೆ ಇಳಿಯುವುದಾಗಿ ಸೂಚಿಸಿದ್ದರು ಎಂದು ಅವರು ಹೇಳಿದ್ದಾರೆ.
ಕೇವಲ ಅರ್ಧ ಲೀಟರ್ ನೀರು ಹೊಂದಿದ್ದ ಶರಣ್ಯ, ಕಾಡಿನ ಹಳ್ಳವೊಂದರ ಬಳಿ ಆಶ್ರಯ ಪಡೆದಿದ್ದರು. ಡ್ರೋನ್ ಕಣ್ಣಿಗೆ ಬೀಳಲೆಂದು ಬಯಲು ಪ್ರದೇಶದಲ್ಲಿ ಕುಳಿತುಕೊಳ್ಳುತ್ತಿದ್ದರು. ಭಾನುವಾರ ಬೆಳಿಗ್ಗೆ ಅವರು ಮರವೊಂದರ ಮೇಲೆ ಕುಳಿತು ಸಹಾಯಕ್ಕಾಗಿ ಕೂಗಿದಾಗ, ಸ್ಥಳೀಯ ಆದಿವಾಸಿಗಳ ತಂಡ ಅವರನ್ನು ಪತ್ತೆಹಚ್ಚಿದೆ.
ಅರಣ್ಯ ಇಲಾಖೆ, ಪೊಲೀಸ್, ನಕ್ಸಲ್ ನಿರೋಧಕ ಪಡೆ ಮತ್ತು ಸ್ಥಳೀಯರು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಸಿಬ್ಬಂದಿ ಈ ಶೋಧ ಕಾರ್ಯದಲ್ಲಿ ನೆರವಾಗಿದ್ದರು. ಶರಣ್ಯ ಪತ್ತೆಯಾದ ನಂತರ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಮಡಿಕೇರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: ಸೋಲೊಪ್ಪಿದ ಅಮೆರಿಕ | ಇರಾನ್ ವಿಧಿಸಿದ 10 ಷರತ್ತುಗಳಿವು

Comments
Post a Comment