ಮೋದಿ ಅವಹೇಳನ ಆರೋಪದಲ್ಲಿ ಬ್ಲಾಕ್‌ ಆಗಿದ್ದ 'X' ಖಾತೆ ಮರು ಸ್ಥಾಪನೆಗೆ ಆದೇಶ


ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಿದ ಆರೋಪದ ಮೇಲೆ ಅಮಾನತುಗೊಂಡಿದ್ದ @DrNimoYadav ಎಂಬ ಪರೋಡಿ ಎಕ್ಸ್ (ವಿಡಂಬನೆ) ಖಾತೆಯನ್ನು ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.

ಪ್ರತೀಕ್ ಶರ್ಮಾ ಎಂಬುವವರು ನಡೆಸುತ್ತಿದ್ದ ಈ ಖಾತೆಯನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಸೆಕ್ಷನ್ 69ಎ ಅಡಿಯಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಆದೇಶದಂತೆ ಮಾರ್ಚ್ 18 ರಂದು ನಿರ್ಬಂಧಿಸಲಾಗಿತ್ತು.

ಇದನ್ನೂ ಓದಿ: PUC Result 2026 | ಇಂದು ದ್ವಿತೀಯ ಪಿಯುಸಿ ಫಲಿತಾಂಶ

ಅರ್ಜಿದಾರರ ಪರ ವಕೀಲರು, ಆಕ್ಷೇಪಾರ್ಹ ಎನ್ನಲಾದ ಟ್ವೀಟ್‌ಗಳನ್ನು ಅಳಿಸಲು ಅರ್ಜಿದಾರರು ಸಿದ್ಧರಿದ್ದಾರೆ, ಪ್ರತಿಯಾಗಿ ಅವರ ಎಕ್ಸ್ ಖಾತೆಯನ್ನು ಮರುಸ್ಥಾಪಿಸಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಈ ವಿಷಯವನ್ನು ಮರುಪರಿಶೀಲಿಸಲು ಅರ್ಜಿದಾರರಿಗೆ ಅಂತರ-ಸಚಿವಾಲಯ ಸಮಿತಿಯ ಮುಂದೆ ಹಾಜರಾಗಿ ತಮ್ಮ ಅಹವಾಲು ಸಲ್ಲಿಸಲು ಕೇಂದ್ರ ಸರ್ಕಾರವು ಅವಕಾಶ ನೀಡಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ತಿಳಿಸಿದರು.

ಸಮಿತಿಯು ಅಂತಿಮ ತೀರ್ಮಾನ ತೆಗೆದುಕೊಳ್ಳುವವರೆಗೆ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮಾತ್ರ ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರು ಎಕ್ಸ್ ಸಂಸ್ಥೆಗೆ ಸೂಚಿಸಿದರು. 

ಆ ಟ್ವೀಟ್‌ಗಳನ್ನು ನಿರ್ಬಂಧಿಸಿದ ತಕ್ಷಣವೇ ಅರ್ಜಿದಾರರ ಖಾತೆಯನ್ನು ಮರುಸ್ಥಾಪಿಸಬೇಕು ಎಂದು ಏಪ್ರಿಲ್ 6 ರಂದು ಆದೇಶಿಸಿದರು.

ಇದನ್ನೂ ಓದಿ: ಕೇರಳದ ಯುವತಿ ಸುಳ್ಳು ಹೇಳಿದರೆ?: ಶರಣ್ಯ ವಿರುದ್ಧ ಬಿಜೆಪಿ ದೂರು

ಅರ್ಜಿದಾರರು ಸಮಿತಿಯ ಮುಂದೆ ಖುದ್ದಾಗಿ ಹಾಜರಾಗಿ ತಮ್ಮ ವಾದ ಮಂಡಿಸಬೇಕು, ಅಗತ್ಯವಿದ್ದರೆ ಅಧಿಕೃತ ಪ್ರತಿನಿಧಿಯ ಸಹಾಯ ಪಡೆಯಬಹುದು ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರ ಟ್ವೀಟ್‌ಗಳು ಕಾನೂನುಬದ್ಧವೇ ಎಂಬ ಬಗ್ಗೆ ಸಮಿತಿಯು ಪರಿಶೀಲನೆ ನಡೆಸಲಿದೆ.

ಒಂದು ವೇಳೆ ಸಮಿತಿಯ ತೀರ್ಮಾನದಿಂದ ಅರ್ಜಿದಾರರ ಸಮಸ್ಯೆ ಬಗೆಹರಿಯದಿದ್ದರೆ, ಅವರು ಕಾನೂನುಬದ್ಧವಾಗಿ ಮುಂದಿನ ಕ್ರಮ ಕೈಗೊಳ್ಳಲು ಸ್ವತಂತ್ರರು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೆ, ಅರ್ಜಿದಾರರ ಖಾತೆಯನ್ನು ಗಮನಿಸಲು ಮತ್ತು ಯಾವುದೇ ಆಕ್ಷೇಪಾರ್ಹ ವಿಷಯ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಸಚಿವಾಲಯಕ್ಕೆ ಮುಕ್ತ ಅವಕಾಶ ನೀಡಲಾಗಿದೆ.

ಸರ್ಕಾರವನ್ನು ಪ್ರಶ್ನಿಸುವ ಮತ್ತು ಪ್ರಧಾನಿಯನ್ನು ಅವಹೇಳನ ಮಾಡುವ ಪೋಸ್ಟ್‌ಗಳಿವೆ ಎಂಬ ಕಾರಣಕ್ಕೆ ಅರ್ಜಿದಾರರ ಖಾತೆಯನ್ನು ನಿರ್ಬಂಧಿಸಲು ಕೇಂದ್ರವು ಕೋರಿತ್ತು ಎಂದು ಎಕ್ಸ್ ಸಂಸ್ಥೆ ಈ ಹಿಂದೆ ಕೋರ್ಟ್‌ಗೆ ತಿಳಿಸಿತ್ತು.

ಈ ಖಾತೆಯು ಪ್ರಧಾನಿಯ ಬಗ್ಗೆ ಸುಳ್ಳು ಕಥೆಗಳನ್ನು ಹರಡುತ್ತಿದೆ ಮತ್ತು ಅವರನ್ನು ಕೆಟ್ಟದಾಗಿ ಚಿತ್ರಿಸುತ್ತಿದೆ, ಇದು ಸಾರ್ವಜನಿಕ ಸುವ್ಯವಸ್ಥೆ ಮತ್ತು ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರಬಹುದು ಎಂದು ಕೇಂದ್ರವು ವಾದಿಸಿತ್ತು.

ಆದರೆ, ಕೇವಲ ಕೆಲವು ಟ್ವೀಟ್‌ಗಳಿಗಾಗಿ ಇಡೀ ಖಾತೆಯನ್ನೇ ನಿರ್ಬಂಧಿಸುವುದು ಕಾನೂನುಬಾಹಿರ ಮತ್ತು ಅತಿಯಾದ ಕ್ರಮ ಎಂದು ಎಕ್ಸ್ ಸಂಸ್ಥೆ ಈ ಮೊದಲು ಆಕ್ಷೇಪ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: ಸೋಲೊಪ್ಪಿದ ಅಮೆರಿಕ | ಇರಾನ್‌ ವಿಧಿಸಿದ 10 ಷರತ್ತುಗಳಿವು

Comments